ಮಂಗಳೂರು, ಫೆ 7 (DaijiworldNews/SM): ತ್ಯಾಜ್ಯ ಸಂಸ್ಕರಣೆ ದೃಷ್ಠಿಯಿಂದ ಮಂಗಳೂರು ಮಹಾನಗರ ಪಾಲಿಕೆ ದಿಟ್ಟ ನಿರ್ಧಾರ ಕೈಗೊಂಡಿದೆ. ನಗರದ ಅಪಾರ್ಟ್ಮೆಂಟ್ ಹಾಗೂ ವಾಣಿಜ್ಯ ಸಂಸ್ಥೆಗಳಲ್ಲಿ ತ್ಯಾಜ್ಯ ಸಂಸ್ಕರಣೆ ವ್ಯವಸ್ಥೆಯನ್ನು ಕಲ್ಪಿಸಲಾಗದಿದ್ದಲ್ಲಿ ಅಥವಾ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ರಚಿಸದಿದ್ದಲ್ಲಿ ಫೆ. 10ರಿಂದ ಅನ್ವಯವಾಗುವಂತೆ ದಂಡ ವಿಧಿಸುವ ಪ್ರಕ್ರಿಯೆ ಆರಂಭಿಸುವುದಾಗಿ ಮನಪಾ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಎಚ್ಚರಿಕೆ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಅಪಾರ್ಟ್ಮೆಂಟ್ಗಳಿಗೆ ಅಸೋಸಿಯೇಶನ್ ಮೂಲಕ ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ 2019ರ ಅಕ್ಟೋಬರ್ ಅಂತ್ಯದೊಳಗೆ ಘನತ್ಯಾಜ್ಯ ಘಟಕವನ್ನು ರಚಿಸುವಂತೆ ಸೂಚನೆ ನೀಡಲಾಗಿತ್ತು ಎಂದರು.
ಪ್ರಥಮ ಹಂತವಾಗಿ 1948 ಅಪಾರ್ಟ್ಮೆಂಟ್ಗಳಿಗೆ ನೋಟೀಸು ಕೂಡಾ ನೀಡಲಾಗಿದೆ. ಡಿಸೆಂಬರ್ 3ರಂದು ಎಲ್ಲಾ ಸಂಘ ಸಂಸ್ಥೆಗಳೊಂದಿಗೆ ಸಭೆ ಕರೆದು ಡಿಸೆಂಬರ್ ಅಂತ್ಯದೊಳಗೆ ತ್ಯಾಜ್ಯ ಸಂಸ್ಕರಣಾ ಘಟಕ ರಚಿಸುವಂತೆ ಮರು ಸೂಚನೆ ನೀಡಲಾಗಿತ್ತು. ಕೆಲವು ಅಪಾರ್ಟ್ಮೆಂಟ್ ಅಸೋಸಿಯೇಶನ್ಗಳು ತ್ಯಾಜ್ಯ ಸಂಸ್ಕರಣೆ ಮಾಡುವ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದರು.