ಪುತ್ತೂರು, ಫೆ 7 (DaijiworldNews/SM): ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪಿನಂಗಡಿ ಕಸಬಾ ಗ್ರಾಮದ ಹಳೆಗೇಟು ಎಂಬಲ್ಲಿರುವ ಜಿ.ಕೆ. ಸ್ಕ್ರಾಪ್ ಎಂಬ ಹೆಸರಿನ ಗುಜಿರಿ ಅಂಗಡಿಯ ಗೋದಾಮಿನಲ್ಲಿ ಇರಿಸಿದ್ದ ಸುಮಾರು ಅಂದಾಜು 1 ಲಕ್ಷ ರೂಪಾಯಿ ಮೌಲ್ಯದ ಸೊತ್ತು ಕಳವುಗೈದ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ.
ಪುತ್ತೂರು ತಾಲೂಕು 34 ನೇ ನೆಕ್ಕಿಲಾಡಿ ಗ್ರಾಮದ ನಿವಾಸಿ ಮಹಮ್ಮದ್ ಸಿನಾನ್ ಯಾನೆ ಸಿನಾನ್ (19), ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ನಿವಾಸಿ ಹಷೀತ್(18) ಹಾಗೂ ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ ನಿವಾಸಿ ಇಸ್ಮಾಯಿಲ್(18) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರು ಅಂಗಡಿಯ ಗೋದಾಮಿನಲ್ಲಿ ಇರಿಸಲಾಗಿದ್ದ ಹಳೆಯ ಗುಜಿರಿ ಸಾಮಾಗ್ರಿಗಳನ್ನು ಕಳವುಗೈದಿದ್ದರು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ಕಳವು ಮಾಡಿದ ಸೊತ್ತುಗಳು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ತನಿಖೆ ಮುಂದುವರೆದಿದೆ.