ಕುಂದಾಪುರ, ಫೆ 7 (DaijiworldNews/SM): ಕೋಟ ಠಾಣಾ ವ್ಯಾಪ್ತಿಯಲ್ಲಿ ನಡೆದ ಜೋಡಿ ಕೊಲೆಗೆ ಸಂಚು ರೂಪಿಸಿದ್ದ ಆರೋಪ ಹೊತ್ತಿರುವ, ಭರತ್ ಹಾಗೂ ಯತೀಶ್ ಕೊಲೆಯ ಸಂಚಿನ ರೂವಾರಿ ಎನ್ನಿಸಿಕೊಂಡ ಕೋಟ ಜಿಲ್ಲಾ ಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆ ಮತ್ತೆ ಹಿರಿಯಡ್ಕ ಜೈಲು ಸೇರಿದ್ದಾರೆ.
ಶುಕ್ರವಾರ ಕುಂದಾಪುರ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಎಲ್ಲಾ ಆರೋಪಿಗಳ ಜೊತೆಗೆ ಆಗಮಿಸಿದ್ದ ರಾಘವೇಂದ್ರ ಕಾಂಚನ್ ಅವರನ್ನು ನೇರವಾಗಿ ಜೈಲಿಗೆ ಕಳುಹಿಸುವಂತೆ ಕುಂದಾಪುರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ನೀಡಿದ ಆದೇಶದಂತೆ ಈ ಪ್ರಕ್ರಿಯೆ ನಡೆದಿದೆ.
ಜೋಡಿ ಕೊಲೆಯ ಪ್ರಕರಣಕ್ಕೆ ಸಂಬಂಧಿಸಿ ಸಂಚು ರೂಪಿಸಿದ್ದಾರೆ ಎನ್ನುವ ಬಲವಾದ ಕಾರಣವಿದ್ದರೂ ರಾಜ್ಯ ಹೈಕೋರ್ಟಿನಲ್ಲಿ ಜಾಮೀನು ನೀಡಲಾಗಿದ್ದು, ಇದನ್ನು ಪ್ರಶ್ನಿಸಿ ಹತ್ಯೆಯಾದ ಭರತ್ ತಾಯಿ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರಕರಣದ ತನಿಖೆ ನಡೆಸಿದ್ದ ನ್ಯಾಯಮೂರ್ತಿಗಳ ದ್ವಿಸದಸ್ಯ ಪೀಠ ರಾಘವೇಂದ್ರ ಕಾಂಚನ್ ಬಾರಿಕೆರೆ ಅವರ ಜಾಮೀನು ವಜಾಗೊಳಿಸಿದ್ದರು.
ಆದರೆ ಆರೋಪಿ ರಾಘವೇಂದ್ರ ಕಾಂಚನ್ ತಲೆ ಮರೆಸಿಕೊಂಡಿದ್ದ. ಆದರೆ ಎಲ್ಲಾ ಆರೋಪಿಗಳ ವಿಚಾರಣೆಯ ದಿನವಾದ ಶುಕ್ರವಾರ ಇತರ ಆರೋಪಿಗಳ ಜೊತೆಗೆ ವಕೀಲರೊಂದಿಗೆ ರಾಘವೇಂದ್ರ ಬಾರಿಕೆರೆ ನ್ಯಾಯಾಲಯಕ್ಕೆ ಹಾಜರಾಗಿದ್ದು, ಕುತೂಹಲಕ್ಕೆ ಕಾರಣವಾಗಿತ್ತು. ನ್ಯಾಯಾಲಯವು ಎಪ್ರಿಲ್ ೧ರಂದು ಮತ್ತೆ ವಿಚಾರಣೆ ದಿನಾಂಕ ನಿಗಧಿಯಾಗಿದ್ದು, ಅಲ್ಲಿಯವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.