ಉಳ್ಳಾಲ, ಫೆ 08 (Daijiworld News/MB) : ಪ್ರವಾಸಿ ಹಡಗಿನ ಸಿಬ್ಬಂದಿಯಾಗಿದ್ದ ಯುವಕನಿಗೆ ಸೋಮವಾರ ನಡೆಯಬೇಕಾಗಿದ್ದ ವಿವಾಹ ಕೊರೋನಾ ವೈರಸ್ ಭೀತಿಯಿಂದಾಗಿ ರಜೆ ಸಿಗದ ಹಿನ್ನಲೆಯಿಂದ ಮುಂದೂಡಲ್ಪಟ್ಟಿದೆ.
ಕುಂಪಲದ ಮಾಧವ ಬಂಗೇರ ಅವರ ಪುತ್ರ ಗೌರವ್ ಅವರು ಚೀನಾ ಮೂಲದ ಸ್ಟಾರ್ ಕ್ರೂಝ್ ಪ್ರವಾಸಿ ಹಡಗಿನ ಸಿಬಂದಿಯಾಗಿದ್ದು ಅವರ ವಿವಾಹ ಮಂಗಳೂರಿನಲ್ಲಿ ಸೋಮವಾರ ನಡೆಯುವುದೆಂದು ನಿಗದಿಯಾಗಿತ್ತು.
ಗೌರವ್ ಅವರು ಈ ಮೊದಲು ನಿರ್ಧಾರ ಮಾಡಿದಂತೆ ಶುಕ್ರವಾರ ಬೆಳಗ್ಗೆ ಮಂಗಳೂರು ತಲುಪಬೇಕಿತ್ತು. ಆದರೆ ಅವರ ಹಡಗಿಗೆ ನಿಗದಿ ಮಾಡಲಾಗಿದ್ದ ತಾಣದಲ್ಲಿ ಪ್ರವಾಸ ಮುಕ್ತಾಯ ಮಾಡಲು ಅವಕಾಶ ನಿರಾಕರಿಸಿದ ಹಿನ್ನಲೆಯಲ್ಲಿ ಇಕ್ಕಟ್ಟಿಗೆ ಸಿಲುಕಿದರು.
ಪ್ರಸ್ತುತ ಅವರ ಹಡಗು ಹಾಂಕಾಂಗ್ ತಲುಪಿದ್ದು, ಕೊರೋನಾ ಭೀತಿಯೀಮದಾಗಿ ಎಲ್ಲರನ್ನೂ ಹಡಗಿನಲ್ಲಿಯೇ ಉಳಿಸಿಕೊಂಡು ನಿಗಾ ಇರಿಸಲಾಗಿದೆ. ಆದ್ದರಿಂದ ಹಡಗಿನಲ್ಲಿರುವ ಸಾವಿರಾರು ಮಂದಿ ಎಲ್ಲಿಯೂ ಹೋಗಲಾರದೆ ಸಿಲುಕಿಕೊಂಡಿದ್ದಾರೆ.
ಗೌರವ್ ಅವರಿದ್ದ ಹಡಗು ಜ. 26ರಂದು ಚೀನದಿಂದ ಪ್ರವಾಸ ಬೆಳೆಸಿ ತೈವಾನ್ನಲ್ಲಿ ಫೆ. 5ರಂದು ಪ್ರವಾಸ ಕೊನೆಗೊಳಿಸಬೇಕಿತ್ತು. ಆದರೆ ಈ ನಡುವೆ ಕೊರೋನಾ ವೈರಸ್ ವಿವಿಧ ದೇಶಗಳಇಗೆ ಹರಡಿದ ಹಿನ್ನಲೆಯಲ್ಲಿ ಚೀನಾದಿಂದ ಹೊರಟಿದ್ದ ಈ ನೌಕೆಯ ಮೇಲೂ ಶಂಕೆಯಾಗಿ ತೈವಾನ್ನಲ್ಲಿ ಜನರನ್ನು ಇಳಿಸಲು ಅವಕಾಶ ನೀಡಿರಲಿಲ್ಲ.
ಆ ಬಳಿಕ ಹಡಗು ಹಾಂಕಾಂಗ್ಗೆ ಪ್ರಯಾಣಿಸಿತು. ಅಲ್ಲಿಯೂ ನಿರ್ಬಂಧ ವಿಧಿಸಿದ್ದರಿಂದ ಪ್ರಸ್ತುತ ಹಡಗು ಬಂದರು ಪ್ರದೇಶದಲ್ಲಿ ಲಂಗರು ಹಾಕಿದೆ.
ಈಗಾಗಲೇ ಹಡಗಿನಲ್ಲಿರುವ ಎಲ್ಲಾ ಸಿಬ್ಬಂದಿಗಳು ಸೇರಿದಂತೆ ಪ್ರಯಾಣಿಕರನ್ನು ಒಂದು ಬಾರಿ ತಪಾಸಣೆ ನಡೆಸಲಾಗಿದೆ. ಆ ಪೈಕಿ ಯಾರಲ್ಲೂ ಕೊರೋನಾ ಸೋಕು ತಗಲಿರುವು ದೃಢಪಟ್ಟಿಲ್ಲ. ಹಡಗಿನಲ್ಲಿ 1,600 ಮಂದಿ ಪ್ರಯಾಣಿಕರಿದ್ದು, ನೂರಾರು ಮಂದಿ ಸಿಬಂದಿ ಇದ್ದಾರೆ. ಈ ಹಡಗಿನಲ್ಲಿ ಒಟ್ಟು 80 ಮಂದಿ ಭಾರತೀಯರು ಇದ್ದಾರೆ.