ಮಂಗಳೂರು, ಫೆ 08 (Daijiworld News/MB) : ರಾಷ್ಟ್ರೀಯ ಹೆದ್ದಾರಿ 66 ರ ಕೂಳೂರಿನಲ್ಲಿ ಫಲ್ಗುಣಿ ನದಿಗೆ ಕಟ್ಟಿರುವ 65 ವರ್ಷಗಳ ಹಳೆಯ ಕಮಾನು ಸೇತುವೆಯ ದುರಸ್ತಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧಾರ ಮಾಡಿದ್ದು ದುರಸ್ತಿ ಹಿನ್ನಲೆಯಲ್ಲಿ ಫೆ.20 ರಿಂದ 10 ದಿನಗಳ ಕಾಲ ಸೇತುವೆಯಲ್ಲಿ ಸಂಚಾರ ಬಂದ್ ಆಗುವ ಸಾಧ್ಯತೆಯಿದೆ.
ಕಾಮಗಾರಿಗೆ ಸುಮಾರು 10 ದಿನಗಳ ಅವಶ್ಯಕತೆಯಿದ್ದು ಫೆ.20 ರಿಂದ ಸೇತುವೆಯಲ್ಲಿ ಸಂಚಾರ ನಿಷೇಧಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಪತ್ರ ಬರೆದಿದೆ. ಈ ಬಗ್ಗೆ ಕೆಲವೇ ದಿನಗಳಲ್ಲಿ ಜಿಲ್ಲಾಧಿಕಾರಿ ಮತ್ತು ಸಂಚಾರ ಪೊಲೀಸರ ಉಪಸ್ಥಿತಿಯಲ್ಲಿ ಸಭೆ ನಡೆಸಿ ದಿನಾಂಕ ಅಂತಿಮ ಮಾಡಲಾಗುತ್ತದೆ ಎಂದು ವರದಿ ತಿಳಿಸಿದೆ.
ಪ್ರಸ್ತುತ ಕೂಳೂರಿನಲ್ಲಿರುವ 2 ಸೇತುವೆಗಳ ನಡುವೆ ಹೊಸದಾಗಿ 6 ಲೇನ್ನ, 66 ಕೋ. ರೂಪಾಯಿ ವೆಚ್ಚದ ಸೇತುವೆ ನಿರ್ಮಾಣದ ಪ್ರಸ್ತಾವ ಈಗ ಎನ್ಎಚ್ಎಐ ಪ್ರಧಾನ ಕಚೇರಿಯಲ್ಲಿದ್ದು ಅನುಮೋದನೆಯಾಗಿಲ್ಲ. ಅನುಮೋದನೆ ದೊರೆತು ಕಾಮಗಾರಿ ಸಂಪೂರ್ಣವಾಗಲು 2-3 ವರ್ಷಗಳ ಅಗತ್ಯವಿರುವ ಹಿನ್ನಲೆಯಲ್ಲಿ ಕಮಾನು ಸೇತುವೆಯನ್ನು ದುರಸ್ತಿಗೊಳಿಸಲು ಹೆದ್ದಾರಿ ಪ್ರಾಧಿಕಾರ ನಿರ್ಧಾರ ಮಾಡಿದ್ದು ಒಟ್ಟು 38 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಕಾಮಗಾರಿ ನಡೆಯಲಿದೆ.
ಪ್ರಾಧಿಕಾರ ಸಂಚಾರ ನಿಷೇಧದ ಸಂದರ್ಭದಲ್ಲಿ ಬದಲಿ ವ್ಯವಸ್ಥೆ ಕಲ್ಪಿಸಲು ಆದ್ಯತೆ ನೀಡಿಲಿದ್ದು ಉಡುಪಿ ಕಡೆಯಿಂದ ಬರುವ ವಾಹನಗಳು ಕಮಾನು ಸೇತುವೆಯ ಮೊದಲೇ ಬಲಕ್ಕೆ ತಿರುಗಿ ಕೂಳೂರಿನ ಹೊಸ ಸೇತುವೆಯ ಮುಖೇನ ಚಲಿಸಿ ಬಳಿಕ ಎಡಬದಿಯ ಹೊಸ ಸಂಪರ್ಕ ರಸ್ತೆಯಲ್ಲಿ ತೆರಳಿ ಮೇಲ್ಸೇತುವೆ ಮುಖೇನ ಸಂಚಾರ ಮಾಡಬೇಕು. ಇದಕ್ಕಾಗಿ ಅಯ್ಯಪ್ಪ ದೇವಸ್ಥಾನದ ಬಳಿ ಡಾಮರು ಹಾಕಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಭೂ ಸಾರಿಗೆ ಹಾಗೂ ಸಚಿವಾಲಯವು ಹೈದರಾಬಾದ್ನ ಮೆಸರ್ಸ್ ಆರ್ವಿ ಅಸೋಸಿಯೇಟ್ಸ್ ಏಜೆನ್ಸಿಯ ಮುಖೇನ ಹಳೆಯ ಕಮಾನು ಸೇತುವೆಯ ಮೇಲ್ಭಾಗ, ಕೆಲ ಭಾಗದ ತಪಾಸಣೆ, ದಾಖಲೆ ಹಾಗೂ ಮಾದರಿ ಪರಿಶೀಲನೆ ನಡೆಸಿತ್ತು. 2018 ರಲ್ಲಿ ಅದು ಪ್ರಯೋಗ್ಯಕ್ಕೆ ಅಯೋಗ್ಯ ಎಂದು ವರದಿ ನೀಡಿತ್ತು. ಈ ಸೇತುವೆಯು ಸಂಚಾರಕ್ಕೆ ಯೋಗ್ಯವಲ್ಲ ಎಂದು ಭಾರತ್ ಮಾಲಾ ಯೋಜನೆಯ ಸರ್ವೇ ನಡೆಸುತ್ತಿರುವ ತಜ್ಞರ ತಂಡ ಹೇಳಿತು.
ಈ ಹಿನ್ನಲೆಯಲ್ಲಿ ಆ ಸೇತುವೆಯಲ್ಲಿ ಸಂಚಾರ ಸ್ಥಗಿತ ಮಾಡಬೇಕೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಜಿಲ್ಲಾಡಳಿತಕ್ಕೆ ಮನವಿ ಮಾಡಿತ್ತು.