ಮಂಗಳೂರು, ಫೆ 08 (Daijiworld News/MB) : ಕಿತ್ತಳೆ ಹಣ್ಣು ಮಾರಾಟ ಮಾಡುತ್ತಾ, ದಾನಿಗಳ ನೆರವು ಯಾಚಿಸುತ್ತಾ ತನ್ನೂರಿನ ಮಕ್ಕಳಿಗೆ ಶಾಲೆ ಕಟ್ಟಿಸಿಕೊಟ್ಟು, ಸರಕಾರಕ್ಕೆ ಹಸ್ತಾಂತರ ಮಾಡಿದ ನಿಸ್ವಾರ್ಥ ಕಾಯಕ ಯೋಗಿ, ಅಕ್ಷರ ಸಂತ ಉಳ್ಳಾಲ ನ್ಯೂಪಡ್ಪುವಿನ ಹರೇಕಳ ಹಾಜಬ್ಬರಿಗೆ ದೇಶದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ ಸಂದ ಹಿನ್ನೆಲೆಯಲ್ಲಿ ದಾಯ್ಜಿವರ್ಲ್ಡ್ ಸುದ್ದಿ ಸಮೂಹ ಸಂಸ್ಥೆಗಳ ವತಿಯಿಂದ ಮಂಗಳೂರಿನ ಬೊಂದೇಲ್ನಲ್ಲಿರುವ ಪ್ರಧಾನ ಕಚೇರಿಯಲ್ಲಿ ಸನ್ಮಾನ ಸಮಾರಂಭ ನಡೆಯಿತು.
ದಾಯ್ಜಿವರ್ಲ್ಡ್ವಾಹಿನಿಯ ನಿರ್ದೇಶಕ ಅಲೆಕ್ಸ್ ಕ್ಯಾಸ್ಟೆಲಿನೋ ಹರೇಕಳ ಹಾಜಬ್ಬರವರಿಗೆ ಶಾಲು ಹೊದಿಸಿ, ಮಾಲಾರ್ಪಣೆ ಮಾಡಿ, ಫಲಪುಷ್ಪವನ್ನಿತ್ತು, ಸ್ಮರಣಿಕೆ ನೀಡಿ ಗೌರವಿಸಿದರು.
ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದ ಹಾಜಬ್ಬ, ಇಂದು ಮಾಧ್ಯಮಗಳು ಅತ್ಯಂತ ಪ್ರಭಾವಶಾಲಿಯಾಗಿದ್ದು, ಹಳ್ಳಿಗಾಡಿನಲ್ಲಿದ್ದ ನನ್ನನ್ನು ಇಷ್ಟೊಂದು ಎತ್ತರಕ್ಕೆ ಕರೆದುಕೊಂಡು ಹೋಗಿವೆ. ಏನೂ ಪ್ರಯೋಜನಕ್ಕೂ ಸಲ್ಲದ ಹಾಜಬ್ಬರನ್ನು ಇಂದು ಎಲ್ಲರೂ ಗುರುತಿಸುವಂತಾಗಿದೆ. ನಾನು ಶಾಲೆಕಟ್ಟಿಸಲು ಮಾಧ್ಯಮಗಳೂ ಸಾಕಷ್ಟು ನನಗೆ ನೆರವು ನೀಡಿದವು. ಅವರ ಪ್ರಚಾರದಿಂದಲೇ ನಾನು ಇಷ್ಟೊಂದು ಮಾಡಲು ಸಾಧ್ಯವಾಯಿತು. ಶಾಲೆ ಕಟ್ಟಲು ನೆರವಾದ ಎಲ್ಲಾ ಕೊಡುಗೈ ದಾನಿಗಳಿಗೆ ನಾನು ದಾಯ್ಜಿವರ್ಲ್ಡ್ ವಾಹಿನಿ ಮೂಲಕ ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದರು.
ಇದೇ ವೇಳೆ ಹರೇಕಳ ಹಾಜಬ್ಬರನ್ನು ತನ್ನ ಲೇಖನದ ಮೂಲಕ ವಿಶ್ವಕ್ಕೆ ಪರಿಚಯಿಸಿದ ಹೊಸದಿಗಂತ ಪತ್ರಿಕೆಯ ಹಿರಿಯ ವರದಿಗಾರ ಗುರುವಪ್ಪ ಎನ್ಟಿ ಬಾಳೇಪುಣಿ ಅವರನ್ನೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ದಾಯ್ಜಿವರ್ಲ್ಡ್ನ ನಿರ್ದೇಶಕರಾದ ರೊನಾಲ್ಡ್ ನಜರೆತ್, ಪ್ರೊಡಕ್ಷನ್ ಡೈರೆಕ್ಟರ್ ಆಶಿತ್ ಪಿಂಟೋ, ಸುದ್ದಿವಾಹಿನಿಯ ವಿಭಾಗ ಮುಖ್ಯಸ್ಥ ಚಂದ್ರಶೇಖರ ಅರಿಬೈಲು, ಸುದ್ದಿ ನಿರೂಪಕ ಚೇತನ್ ಪಿಲಿಕುಳ, ಎಂಸಿಆರ್ನ ಅಲೆನ್, ಗೀತಾ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.