ಬಂಟ್ವಾಳ: 'ನಮ್ಮ ಹೋರಾಟ ಕಾಯ್ದೆಗಳ ವಿರುದ್ಧ ಮಾತ್ರ ಸೀಮಿತವಾಗಬಾರದು'- ಮಹೇಂದ್ರ ಕುಮಾರ್'
Sat, Feb 08 2020 03:20:05 PM
ಬಂಟ್ವಾಳ, ಫೆ 08 (Daijiworld News/MB) : ಆರ್ಎಸ್ಎಸ್ ಹಾಗೂ ಬಿಜೆಪಿಯವರು ಪಾಕಿಸ್ತಾನ ಹಾಗೂ ಮುಸ್ಲಿಮರನ್ನು ದ್ವೇಷಿಸುವುದೇ ದೇಶಭಕ್ತಿ ಎಂದು ನಂಬಿರುರುವರು. ಅದೇ ರೀತಿ ಕೆಲವರಲ್ಲಿ ಆರ್ಎಸ್ಎಸ್ ಹಾಗೂ ಬಿಜೆಪಿಯವರನ್ನು ಟೀಕೆ ಮಾಡುವುದೇ ದೇಶ ಭಕ್ತಿ ಎಂಬ ತಪ್ಪು ಕಲ್ಪನೆ ಬೆಳೆಯುತ್ತಿದೆ. ಆರ್ಎಸ್ಎಸ್, ಬಿಜೆಪಿ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಿ ಸಮೃದ್ಧ, ಸಾಮರಸ್ಯ, ಭಾವೈಕ್ಯತೆ ತುಂಬಿರುವ ಭಾರತವನ್ನು ಕಟ್ಟುವುದೇ ನೈಜ್ಯವಾದ ದೇಶಭಕ್ತಿಯಾಗಿದೆ ಎಂದು ಚಿಂತಕ ಮಹೇಂದ್ರ ಕುಮಾರ್ ಅಭಿಪ್ರಾಯ ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ, ಎನ್ಆರ್ಸಿ, ಎನ್ಪಿಆರ್ ವಿರುದ್ಧ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಸಮಿತಿ ಫರಂಗಿಪೇಟೆ ವತಿಯಿಂದ ಶುಕ್ರವಾರ ಫರಂಗಿಪೇಟೆ ಸುಲ್ತಾನ್ ಮೈದಾನದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಮ್ಮ ಹೋರಾಟ, ಚಳವಳಿ ಸಿಎಎ, ಎನ್ಆರ್ಸಿ, ಎನ್ಪಿಆರ್ಗೆ ಮಾತ್ರ ಸೀಮಿತವಾದ ಹೋರಾಟವಾಗಬಾರದು. ಯಾರೋ ಒಂದಿಬ್ಬರು ರಚನೆ ಮಾಡಿರುವ ಈ ಕಾಯ್ದೆಗಳು ಜಾರಿಯಾಗಲ್ಲ. ಜಾರಿ ಮಾಡಲು ಈ ದೇಶದ ಜನರು ಬಿಡುವುದಿಲ್ಲ ಎಂದು ಹೇಳಿದರು.
ಈ ದೇಶವನ್ನು ಪ್ರೀತಿ ಮಾಡದ, ದೇಶದ ಆಡಳಿತವನ್ನು ಖಾಸಗಿಯವರಿಗೆ ಹಂಚುವ, ದೇಶವನ್ನು ಧರ್ಮಗಳ ಆಧಾರದಲ್ಲಿ ಛಿದ್ರ ಮಾಡುವ ಮನಸ್ಥಿತಿಯ ದುಷ್ಟ ಶಕ್ತಿಗಳ ಕೈಯಲ್ಲಿ ಈ ದೇಶದ ಆಡಳಿತವಿದೆ. ಇದಕ್ಕೆ ಕಾಋಣ ಯಾರು ಎಂಬುದನ್ನು ನಾವೆಲ್ಲರೂ ಅವಲೋಕನ ಮಾಡಬೇಕು. ಆ ಹಿನ್ನಲೆಯಲ್ಲಿ ಆವೇಶಭರಿತ ಭಾಷಣಗಳ ಮೂಲಕ ಜನರ ಭಾವನೆಗಳನ್ನು ಕದಡುವ ಕಾರ್ಯವನ್ನು ನಾವು ಮಾಡದೆ ಆರ್ಎಸ್ಎಸ್,ಬಿಜೆಪಿಯವರ ಷಡ್ಯಂತ್ರಗಳನ್ನು ಜನರಿಗೆ ತಿಳಿಸುವ ಕಾರ್ಯ ನಮ್ಮದಾಗಬೇಕು. ಆ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯದ ಕಡೆಗೆ ಹೆಚ್ಚು ಗಮನಕೊಟ್ಟು ಆ ಕಾರ್ಯಗಳನ್ನು ಹೆಚ್ಚು ನಡೆಸಬೇಕು ಎಂದರು.
ಬಿಜೆಪಿ ಹಾಗೂ ಆರ್ಎಸ್ಎಸ್ ಈ ದೇಶದ ಆಡಳಿತವನ್ನು ತನ್ನಲ್ಲಿ ಶಾಶ್ವತವಾಗಿ ಉಳಿಸಿಕೊಳ್ಳಲು ಹಿಂದೂ ಮುಸ್ಲಿಮರ ಮಧ್ಯೆ ಬಿರುಕು ಉಂಟು ಮಾಡುತ್ತಿದ್ದಾರೆ. ಅವರ ಆ ಕಾರ್ಯಕ್ಕಾಗಿ ಹಿಂದುಳಿದ ಜಾತಿಗಳ ಅಮಾಯಕ ಯುವಕರನ್ನು ಬಳಕೆ ಮಾಡುತ್ತಿದ್ದಾರೆ. ಇವೆಲ್ಲದರ ವಿರುದ್ಧ ನಾವು ವೇದಿಕೆಯಲ್ಲಿ ನಿಂತು ಆರ್ಎಸ್ಎಸ್ ಬಿಜೆಪಿ ವಿರುದ್ಧವಾಗಿ ಆವೇಶ ಬರಿತವಾಗಿ ಭಾಷಣ, ಟೀಕೆ ಮಾಡಿದರೆ ಅದನ್ನು ಹಿಂದೂ ಧರ್ಮ ಹಾಗೂ ದೇಶದ ವಿರುದ್ಧ ಟೀಕೆ ಮಾಡಲಾಗಿದೆ ಎಂದು ಬಿಂಬಿಸುತ್ತಾರೆ. ಆ ರೀತಿ ಬಿಂಬಿಸಿ ಇನ್ನಷ್ಟು ಹುಡುಗರನ್ನು ತಮ್ಮ ಪರವಾಗಿ ಮಾಡಿಕೊಳ್ಳಲು ಸಹಾಯಾಗುತ್ತದೆ. ಆ ಹಿನ್ನಲೆಯಲ್ಲಿ ಬಿಜೆಪಿ ಆರ್ಎಸ್ಎಸ್ ಷಡ್ಯಂತ್ರಕ್ಕೆ ಬಲಿಯಾಗುತ್ತಿರುವ ಅಮಾಯಕ ಯುವಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ನಾವು ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.