ಬಂಟ್ವಾಳ, ಫೆ.08 (Daijiworld News/PY) : "ಸಿಎಎ ಹಾಗೂ ಎನ್ಆರ್ಸಿ ಜಾರಿ ಭಾರತ ಮಾತೆ ಮೇಲೆ ನಡೆಯುತ್ತಿರುವಂತಹ ಒಂದು ದೌರ್ಜನ್ಯ" ಎಂದು ಚಿಂತಕಿ ಭವ್ಯ ನರಸಿಂಹ ಮೂರ್ತಿ ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ, ಎನ್ಆರ್ಸಿ, ಎನ್ಪಿಆರ್ ವಿರುದ್ಧ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಸಮಿತಿ ಫರಂಗಿಪೇಟೆ ವತಿಯಿಂದ ಶುಕ್ರವಾರ ಫರಂಗಿಪೇಟೆ ಸುಲ್ತಾನ್ ಮೈದಾನದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
"ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜೈ ಶಾ ಉತ್ತಮ ಉದ್ಯಮ ಮಾಡಿ ಕೋಟ್ಯಾಂತರ ರೂ. ಸಂಪಾದನೆ ಮಾಡುತ್ತಿದ್ದಾರೆ. ಒಂದು ದಿನವೂ ಕ್ರಿಕೆಟ್ ಆಡದಿದ್ದರೂ ಅವರು ಬಿಸಿಸಿಗೆ ಆಯ್ಕೆ ಆಗುತ್ತಾರೆ. ಆದರೆ, ಅಮಿತ್ ಶಾ ಅವರ ಭಾಷಣ ಕೇಳಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ಪ್ರತಿಭಟನೆ ನಡೆಸುವವರ ಮೇಲೆ ಪೊಲೀಸರು ಗುಂಡಿನ ದಾಳಿ ಮಾಡಿ, ಯುವಕರು ಜೈಲು ಸೇರಿದ್ದಾರೆ. ಅವರ ಹಾಗೂ ಅವರ ಕುಟುಂಬದ ಸ್ಥಿತಿ ಅತಂತ್ರವಾಗಿದೆ. ಆರ್ಎಸ್ಎಸ್ ಹಾಗೂ ಬಿಜೆಪಿಯವರ ಭಾಷಣಕ್ಕೆ ದಾರಿ ತಪ್ಪುತ್ತಿರುವ ಹಿಂದುಳಿದ ವರ್ಗಗಳ ಯುವಕರು ಇದನ್ನು ಅರ್ಥ ಮಾಡಿಕೊಳ್ಳಬೇಕು" ಎಂದು ಹೇಳಿದ್ದಾರೆ.
ಭಾರತದ ಯುವ ಜನಾಂಗವು ಗೊಂದಲದಲ್ಲಿದ್ದಾರೆ. ಏಕೆಂದರೆ, ಅವರು ಸರ್ಕಾರ ಏನು ಮಾಡುತ್ತದೆಯೋ ಅದನ್ನು ಒಪ್ಪಿಕೊಳ್ಳಬೇಕು. ಅವರನ್ನು ಹೊಗಳಬೇಕು. ಒಂದು ವೇಳೆ ಒಪ್ಪದೇ ಇದ್ದರೆ ದೇಶ ದ್ರೋಹಿ, ಟುಕ್ಡೇ ಟುಕ್ಡೇ ಗ್ಯಾಂಗ್ ಈ ರೀತಿಯಾದ ಹೆಸರಿಂದ ಕರೆಯುತ್ತಾರೆ. ಕೆಲವರು ಅದರ ವಿರುದ್ಧವಾಗಿ ಮಾತನಾಡುತ್ತಾರೆ. ಇನ್ನು ಕೆಲವರು ದಿಕ್ಕು ತಪ್ಪಿ ಹೆದರಿ ನೀವು ಹೇಳಿದ್ದೇ ಸರಿ ಎನ್ನುತ್ತಾರೆ. ಇನ್ನುಳಿದವರು ಸದ್ಯಕ್ಕೆ ಈ ವಿಚಾರವಾಗಿ ಮಾತನಾಡುವುದು ಬೇಡ, ಈ ಬಗ್ಗೆ ಮಾತನಾಡಿದರೆ ನನ್ನನ್ನು ವಿರೋಧ ಮಾಡುತ್ತಾರೆ ಅಂದು ಕೊಳ್ಳುವವರಿದ್ದಾರೆ ಎಂದು ತಿಳಿಸಿದ್ದಾರೆ.
"ಪ್ರಸ್ತುತ ಆರ್ಎಸ್ಎಸ್ನವರು ರಾಷ್ಟ್ರವಾದವನ್ನು ಮುಂದಿಟ್ಟುಕೊಂಡಿದ್ದಾರೆ. ಭಾರತ ಹಿಂದೂಗಳಿಗೆ ಸೇರಿದ್ದು ಎಂದು ಮಾತನಾಡುತ್ತಾರೆ. ರವೀಂದ್ರನಾಥ ಠಾಗೂರ್ ಅವರ ಪ್ರಕಾರ ರಾಷ್ಟ್ರವಾದವೆಂದರೆ, ಇಡೀ ಜಗತ್ತು ಒಂದು ಕುಟುಂಬದಂತೆ ಇರಬೇಕು. ಯಾವುದೇ ಗಡಿ ಇರಬಾರದು. ಗಾಂಧೀಜಿ ಆವರ ಪ್ರಕಾರ, ರಾಷ್ಟ್ರವಾದ ಇರಬೇಕು. ಆದರೆ ಒಂದು ದೇಶ ಪ್ರೇಮದಂತ ರಾಷ್ಟ್ರವಾದವಿರಬೇಕು. ಅದು ಸ್ವರಾಜ್ಯ, ಸ್ವದೇಶ, ಹಳ್ಳಿಗಳು ಮುಂದೆ ಬರಬೇಕು, ನಮ್ಮ ರೈತರ ಏಳಿಗೆಯಾಗಬೇಕು. ನಮ್ಮ ದೇಶ ಮುಂದೆ ಹೋಗಬೇಕು ಎಂದಿದ್ದಾರೆ. ಕುವೆಂಪು ಅವರು ವಿಶ್ವ ಮಾನವ ಸಂದೇಶವನ್ನು ನೀಡಿದ್ದಾರೆ. ಈ ಮಹಾತ್ಮರು ಹೇಳಿದ ವಿಷಯಗಳಿಗೂ ಬಿಜೆಪಿ ಹೇಳುವ ವಿಷಯಕ್ಕೂ ಇರುವ ವ್ಯತ್ಯಾಸವನ್ನು ತಿಳಿಯಬೇಕು. ಯಾರು ಗೊಂದಲದಲ್ಲಿದ್ದಾರೋ ಅವರಿಗೆ ಈ ವ್ಯತ್ಯಾಸ ಸಂಪೂರ್ಣವಾಗಿ ಅರ್ಥವಾಗಬೇಕು. ಹೀಗಾಗಿ ಯಾವುದು ತಪ್ಪು, ಯಾವುದು ಸರಿ ಎಂದು ಅವರೇ ನಿರ್ಧರಿಸುತ್ತಾರೆ" ಎಂದು ಹೇಳಿದ್ದಾರೆ.
"ನಿಜವಾದ ದೇಶ ಪ್ರೇಮ ಇರುವಂತಹ ರಾಷ್ಟ್ರವಾದದಲ್ಲಿ, ನಮ್ಮ ದೇಶದಲ್ಲಿರುವ ಎಲ್ಲರೂ ಸೌಹಾರ್ದತೆಯಿಂದ ಬಾಳಬೇಕು. ನಮ್ಮ ಧರ್ಮದ ಮೇಲಿರುವ ಗೌರವದಂತೆ ಇನ್ನೊಂದು ಧರ್ಮದ ಮೇಲೆ, ಭಾಷೆಯ ಮೇಲೂ ಅಷ್ಟೇ ಗೌರವವಿರಬೇಕು ಎಂದು ತಿಳಿಸಿದೆ" ಎಂದಿದ್ದಾರೆ.
"ಆರ್ಎಸ್ಎಸ್ ಪ್ರಕಾರ, ಒಂದು ಧರ್ಮ ಇನ್ನೊಂದಕ್ಕಿಂತ ದೊಡ್ಡದು. ಯಾಕೆಂದರೆ ಒಬ್ಬರ ಮೇಲಿನ ಪ್ರಾಬಲ್ಯದಿಂದ ಅವರು ಸ್ಥಾನಕ್ಕೆ ಬರುತ್ತಾರೆ. ಇಲ್ಲದಿದ್ದರೆ ಅವರಿಗೇ ಯಾವುದೇ ಸ್ಥಾನವೂ ಇರುವುದಿಲ್ಲ ಹಾಗೂ ಓಟು ಬೀಳುವುದಿಲ್ಲ.ಇದೇ ರೀತಿಯಾಗಿ ಹಿಟ್ಲರ್ ಮಾಡಿದ್ದ. ಬಿಜೆಪಿ ಹಿಟ್ಲರ್ನ ಮಾರ್ಗವನ್ನು ಅನುಸರಿಸುತ್ತಿದೆ. ಓಟ್ ಬ್ಯಾಂಕ್ಗಾಗಿ ಬಹುಸಂಖ್ಯಾತರು ಅಲ್ಪಸಂಖ್ಯಾತರ ನಡುವೆ ಬಿರುಕು ಮೂಡಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.