ಕಾರ್ಕಳ, ಫೆ 9 (Daijiworld News/MSP): ಸತತ ಎರಡು ಬಾರಿ ಗರ್ಭಪಾತವಾಗಿದ್ದ ಮಹಿಳೆಯು ತೋಡಿಗೆ ಸ್ನಾನ ಮಾಡಲೆಂದು ಹೋದಾಗ ಅಲ್ಲಿಯೇ ತೀವ್ರ ರಕ್ತಸ್ರಾವ ಉಂಟಾದ ಪರಿಣಾಮ ಪ್ರಜ್ಞೆತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಕಾರ್ಕಳದ ಅಜೆಕಾರು ಎಂಬಲ್ಲಿ ನಡೆದಿದೆ.
ಸುಶೀಲಾ (34) ಮೃತಪಟ್ಟಿರುವ ಮಹಿಳೆ.
ಸುಶೀಲಾ ಅವರು 6 ತಿಂಗಳ ಹಿಂದೆ ಗರ್ಭಪಾತವಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ನಂತರ ಗರ್ಭವತಿಯಾಗಿದ್ದ ಆಕೆಗೆ, ಒಂದು ವಾರದ ಹಿಂದೆಯಷ್ಟೇ ತೀವ್ರ ಹೊಟ್ಟೆ ನೋವು ಪ್ರಾರಂಭವಾಗಿ ಮತ್ತೆ ಗರ್ಭಪಾತವಾಗಿತ್ತು. ಆಗ ಕಾರ್ಕಳದ ಪ್ರತಿಭಾ ನರ್ಸಿಂಗ್ ಹೋಂಗೆ ಎರಡು ದಿನಗಳ ಕಾಲ ದಾಖಲಾಗಿ ಚಿಕಿತ್ಸೆ ಪಡೆದು ನಂತರ ಮನೆಗೆ ತೆರಳಿದ್ದರು. ನಂತರ ತವರು ಮನೆಯಲ್ಲಿದ್ದು, ಕಡ್ತಲದ ಸಿರಿಬೈಲಿನಲ್ಲಿ ಜಾತ್ರೆ ಇದ್ದ ಕಾರಣ ಫೆ7 ರಂದು ಗಂಡನ ಮನೆಗೆ ಬಂದಿದ್ದರು.
ಫೆ.8ರಂದು ಮಧ್ಯಾಹ್ನದ ವೇಳೆ ಹೊಟ್ಟೆ ನೋವು ಪ್ರಾರಂಭವಾಗಿ ಮದ್ದು ಕೂಡ ತೆಗೆದುಕೊಂಡಿದ್ದರು. ಅದಾದ ಬಳಿಕ ಬಟ್ಟೆ ತೊಳೆಯಲು ಹಾಗೂ ಸ್ನಾನ ಮಾಡಲೆಂದು ಮಧ್ಯಾಹ್ನ 1:30 ಗಂಟೆಗೆ ಮನೆ ಬಳಿಯ ನೀರಿನ ತೋಡಿಗೆ ಸುಶೀಲಾ ಹೋಗಿದ್ದರು. ಅಲ್ಲಿ ಕೆಲವು ಹೊತ್ತಿನ ಬಳಿಕ ತೀವ್ರ ರಕ್ತಸ್ರಾವ ಉಂಟಾಗಿ ನಿತ್ರಾಣಗೊಂಡು ನೀರಿನ ತೋಡಿಗೆ ಬಿದ್ದು ಮೃತಪಟ್ಟಿರುವುದಾಗಿ ಅಜೆಕಾರು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.