ಮಂಗಳೂರು, ಫೆ.09 (Daijiworld News/PY): ನಗರದ ಸಾರ್ವಜನಿಕರಿಗೆ ಎಂಡಿಎಂಎ ಎನ್ನುವ ಮಾದಕ ವಸ್ತುವನ್ನು ಮುಂಬೈಯಿಂದ ಖರೀದಿಸಿ ಮಂಗಳೂರಿಗೆ ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದವರನ್ನು ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಇಕಾನಾಮಿಕ್, ನಾರ್ಕೋಟಿಕ್ ಠಾಣೆಯ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ನಗರದ ಸಾರ್ವಜನಿಕರಿಗೆ ನಿಷೇಧಿತ ಮಾದಕವನ್ನು ಮುಂಬೈಯಿಂದ ಅಕ್ರಮವಾಗಿ ಖರೀದಿಸಿ ಮಂಗಳೂರಿಗೆ ಐಷಾರಾಮಿ ಕಾರೊಂದರಲ್ಲಿ ತರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಮಂಗಳೂರು- ಉಡುಪಿ ರಾಷ್ಟ್ರೀಯ ಹೆದ್ದಾರಿಯ ಮುಲ್ಕಿ ಬಳಿ ಕಾರನ್ನು ತಪಾಸಣೆ ಮಾಡಿದ್ದು ಈ ಸಂದರ್ಭ ಎಂಡಿಎಂಎ ಎಂಬ ನಿಷೇದಿತ ಮಾದಕ ವಸ್ತುವನ್ನು ಹೊಂದಿದ್ದ, ಚೊಕ್ಕಬೆಟ್ಟು ನಿವಾಸಿ ಮೊಹಮ್ಮದ್ ಶರೀಫ್ ಸಿದ್ದಿಕ್ (40), ಕಾಟಿಪಳ್ಳ ನಿವಾಸಿ ಮೊಹಮ್ಮದ್ ಶಾಫಿ (33), ಮೊಹಮ್ಮದ್ ಅನಾಸ್ (27) ಎಂಬವರನ್ನು ವಶಕ್ಕೆ ಪಡೆದುಕೊಂಡು ಅವರಿಂದ ಸುಮಾರು 87,560 ಮೌಲ್ಯದ ಎಂಡಿಎಂಎ ಮಾದಕ ವಸ್ತು, 3 ಮೊಬೈಲ್ ಫೋನ್ಗಳು ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಐಷಾರಾಮಿ ಬಿಎಂಡಬ್ಲೂ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ನಿಷೇದಿತ ಮಾದಕ ವಸ್ತು ಎಂಡಿಎಂಎ, ಮೊಬೈಲ್ ಫೋನ್ಗಳು ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಬಿಎಂಡಬ್ಲೂ ಕಾರಿನ ಒಟ್ಟು ಮೌಲ್ಯ ಸುಮಾರು 51,12,560 ಲಕ್ಷ ಆಗಬಹುದು ಎಂದು ಅಂದಾಜಿಸಲಾಗಿದೆ.
ಆರೋಪಿಗಳು ಮುಂಬೈಯಿಂದ ಅಕ್ರಮವಾಗಿ ಮಾದಕ ವಸ್ತುಗಳನ್ನು ಖರೀದಿಸಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಹಣ ಗಳಿಸಲು ಮಂಗಳೂರು ಕಡೆಗೆ ಬರುತ್ತಿದ್ದರು.
ಆರೋಪಿಗಳ ಪೈಕಿ ಮೊಹಮ್ಮದ್ ಶರೀಫ್ ಸಿದ್ದಿಕ್ ಎಂಬಾತನ ವಿರುದ್ಧ ಈ ಹಿಂದೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತುವನ್ನು ಹೊಂದಿದ ಬಗ್ಗೆ ಪ್ರಕರಣ ದಾಖಲಾಗಿದ್ದು, ಇನ್ನೊಬ್ಬ ಆರೋಪಿ ಮೊಹಮ್ಮದ್ ಶಾಫಿ ಯಾನೆ ಚಪ್ಪಿ ಎಂಬಾತನ ವಿರುದ್ದವೂ ಈ ಹಿಂದೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ, ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಹೊಂದಿದ ಬಗ್ಗೆ ಪ್ರಕರಣ ದಾಖಲಾಗಿತ್ತು. ಆರೋಪಿ ಮೊಹಮ್ಮದ್ ಅನಾಸ್ ಎಂಬಾತನ ವಿರುದ್ಧವೂ ಈ ಹಿಂದೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣವೊಂದು ದಾಖಲಾಗಿತ್ತು.
ಪೊಲೀಸ್ ಆಯುಕ್ತ ಡಾ.ಹರ್ಷ ಐ.ಪಿ.ಎಸ್, ಮಾನ್ಯ ಪೊಲೀಸ್ ಉಪ ಆಯುಕ್ತರವರಾದ ಶ್ರೀ ಲಕ್ಷ್ಮಿ ಗಣೇಶ್ ಅವರ ಮಾರ್ಗದರ್ಶನದಲ್ಲಿ ಮಂಗಳೂರು ಸಿಸಿಬಿ ಘಟಕದ ಇನ್ಸ್ಪೆಕ್ಟರ್ ಶಿವಪ್ರಕಾಶ್ ಆರ್ ನಾಯ್ಕ್, ಪಿಎಸ್ಐ ಕಬ್ಬಾಳ್ ರಾಜ್ ಮತ್ತು ಸಿಬ್ಬಂದಿಗಳು ಹಾಗೂ ಎಕಾನಾಮಿಕ್ ಮತ್ತು ನಾರ್ಕೋಟಿಕ್ ಪೊಲೀಸ್ ಠಾಣೆಯ ಪಿಎಸ್ಐ ಲತಾ ಮತ್ತು ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.