ಉಡುಪಿ, ಜ 09 (DaijiworldNews/SM): ಶಂಕಿತ ಕೊರೊನಾ ವೈರಸ್ ಪರೀಕ್ಷೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಮೂವರಲ್ಲಿಯೂ ಕೊರೊನಾ ವೈರಸ್ ಪತ್ತೆಯಾಗಿಲ್ಲ ಎಂದು ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ವೈರಲ್ ಪತ್ತೆ ಪ್ರಯೋಗಾಲಯ (ವಿಡಿಎಲ್) ಇಂದು ಉಡುಪಿ ಜಿಲ್ಲಾಡಳಿತಕ್ಕೆ ದೃಡಪಡಿಸಿದೆ.
ಚೀನಾದಿಂದ ಕೆಲ ದಿನಗಳ ಹಿಂದೆ ಹುಟ್ಟೂರು ಉಡುಪಿಗೆ ಮರಳಿ ಬಂದಿದ್ದ ನಾಲ್ವರಲ್ಲಿ ಶಂಕಿತ ಕೊರೊನಾ ವೈರಸ್ ಬಗ್ಗೆ ಶಂಕೆ ಮೂಡಿತ್ತು. ಹಾಗಾಗಿ ಫೆ.7ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಅದರಲ್ಲಿ, ಮಹಿಳೆಗೆ ಯಾವುದೇ ವೈರಸ್ ಲಕ್ಷಣ ಕಾಣಿಸಿಕೊಳ್ಳದ ಹಿನ್ನಲೆಯಲ್ಲಿ ಮಹಿಳೆಯನ್ನು ಫೆ.7ರಂದು ಮನೆಗೆ ಕಳುಹಿಸಲಾಗಿತ್ತು. ಉಳಿದಂತೆ ನಾಲ್ಕು ವರ್ಷದ ಹೆಣ್ಣು ಮಗು, 24ವರ್ಷದ ಯುವಕ ಹಾಗೂ 40ವರ್ಷದ ವ್ಯಕ್ತಿಯ ರಕ್ತ ಹಾಗೂ ಗಂಟಲ ದ್ರವವನ್ನು ಕೊರೊನಾ ವೈರಸ್ ಪತ್ತೆಗಾಗಿ ಬೆಂಗಳೂರು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರು, "ಬೆಂಗಳೂರಿನ ಪ್ರಯೋಗಾಲಯದಿಂದ ಈ ಮೂವರ ವೈದ್ಯಕೀಯ ವರದಿ ಇಂದು ಬಂದಿದ್ದು, ಇದರಲ್ಲಿ ವೈರಸ್ ಲಕ್ಷಣಗಳು ಕಂಡು ಬಂದಿಲ್ಲ ಎಂದು ತಿಳಿಸಲಾಗಿದೆ. ಹಾಗಾಗಿ, ಉಡುಪಿ ಜಿಲ್ಲೆಯಲ್ಲಿ ಯಾವುದೇ ಕೊರೊನಾ ವೈರಸ್ ಪ್ರಕರಣಗಳು ಕಂಡು ಬಂದಿಲ್ಲ. ಕೊರೊನಾ ವೈರಸ್ ಬಗ್ಗೆ ಜನತೆ ಆತಂಕ ಪಡುವ ಅಗತ್ಯ ಇಲ್ಲ" ಎಂದು ಹೇಳಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ತೆರೆಯಲಾಗಿರುವ ಐಸೊಲೇಟೆಡ್ ವಾರ್ಡ್ ನಲ್ಲಿ ದಾಖಲಾಗಿರುವ ಈ ಮೂವರಿಗೂ ಚಿಕಿತ್ಸೆ ಮುಂದುವರಿಸಲಾಗಿದ್ದು. ಫೆ.10ರಂದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಮನೆಗೆ ಕಳುಹಿಸಿಕೊಡಲಾಗುವುದು ಎಂದು ಜಿಲ್ಲಾಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.