ಬಂಟ್ವಾಳ, ಜ 09 (DaijiworldNews/SM): ಸ್ನೇಹಿತರ ಜೊತೆ ಕಾರಿಂಜ ದೇವಸ್ಥಾನದ ದೇವರ ಕೆರೆಗೆ ಸ್ನಾನಕ್ಕೆ ಇಳಿದ ಯುವಕನೋರ್ವ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕಾರಿಂಜದಲ್ಲಿ ನಡೆದಿದೆ. ಸಿದ್ದಕಟ್ಟೆ ಸಮೀಪದ ವಕ್ಕಾಡಿಗೋಳಿ ನಿವಾಸಿ ಸುಕೇಶ್ (26) ಎಂಬವರು ನೀರಿನಲ್ಲಿ ಮುಳುಗಿ ಮೃತಪಟ್ಟ ಯುವಕನೆಂದು ಗುರುತಿಸಲಾಗಿದೆ.
ಸುಕೇಶ್ ಮಂಗಳೂರು ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದು, ಇಂದು ಆದಿತ್ಯವಾರ ರಜಾ ದಿನವಾದ್ದರಿಂದ ತನ್ನ ಇಬ್ಬರು ಸ್ನೇಹಿತರ ಜೊತೆ ಕಾರಿಂಜಕ್ಕೆ ಬಂದಿದ್ದರು.
ಸಂಜೆಯ ವೇಳೆ ಕಾರಿಂಜದ ದೇವರ ಕೆರೆಗೆ ಸ್ನಾನ ಮಾಡಲು ಎಂದು ಮೂವರು ಇಳಿದಿದ್ದಾರೆ. ಆದರೆ ಆಕಸ್ಮಿಕವಾಗಿ ಸುಕೇಶ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಕೆಲವು ಗಂಟೆಗಳ ಕಾಲ ಹುಡುಕಾಡಿದ ಬಳಿಕ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ಎಸ್. ಐ.ಸೌಮ್ಯ ಹಾಗೂ ಸಿಬ್ಬಂದಿ ಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.