ಕಾಸರಗೋಡು, ಜ 09 (DaijiworldNews/SM): ವರ್ತಕರೋರ್ವರ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ ನಗದು ದೋಚಿದ ಘಟನೆ ಕಾಸರಗೋಡಿನ ಬದಿಯಡ್ಕ ಪೇಟೆಯ ಫ್ಯಾನ್ಸಿ ಅಂಗಡಿ ಮಾಲಕರಾದ ಶ್ರೀನಿವಾಸ್ ರಾವ್ ಎಂಬವರ ಮನೆಯಲ್ಲಿ ನಡೆದಿದೆ. ಶ್ರೀನಿವಾಸ್ ರಾವ್ ಹಾಗೂ ಕುಟುಂಬಸ್ಥರು ಮನೆಗೆ ಬೀಗ ಹಾಕಿ ಎರಡು ದಿನಗಳ ಹಿಂದೆ ಕೊಲ್ಕತ್ತಕ್ಕೆ ತೆರಳಿದ್ದು, ಈ ಸಂದರ್ಭದಲ್ಲಿ ಕೃತ್ಯ ನಡೆದಿದೆ.
ಒಳನುಗ್ಗಿದ ಕಳ್ಳರು 80ಪವನ್ ಚಿನ್ನಾಭರಣ ಹಾಗೂ ೨ಲಕ್ಷ ರೂಪಾಯಿ ನಗದು ಕಳವುಗೈದ ಘಟನೆ ಆದಿತ್ಯವಾರ ಸಂಜೆ ಬೆಳಕಿಗೆ ಬಂದಿದೆ. ನೆರೆಮನೆಯ ವ್ಯಕ್ತಿಯೋರ್ವರು ತೋಟಕ್ಕೆ ನೀರು ಹಾಯಿಸಲು ಬಂದಾಗ ಮುಂಬಾಗಿಲು ತೆರೆದಿರುವುದು ಕಂಡು ಬಂದಿದೆ. ಬಳಿಕ ಸಂಬಂಧಿಕರೊಬ್ಬರಿಗೆ ಕರೆಮಾಡಿದ್ದು ಸ್ಥಳಕ್ಕೆ ತಲುಪಿ ಪರಿಶೀಲಿಸಿದಾಗ ಬಾಗಿಲು ಮುರಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಮನೆಯ ಕಪಾಟು ಒಡೆದು ಅದರೊಳಗಿದ್ದ ಸಾಮಾಗ್ರಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬಂದಿತ್ತು, ಬಳಿಕ ಮನೆಮಾಲಕರಾದ ಶ್ರೀನಿವಾಸ್ ಅವರಿಗೆ ಮಾಹಿತಿ ನೀಡಲಾಗಿತ್ತು. ಬದಿಯಡ್ಕ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಮನೆ ಮಾಲಕರು ಮನೆಗೆ ಮರಳಿ ಬಂದ ಬಳಿಕ ಕಳವಾದ ಚಿನ್ನಾಭರಣ ಮತ್ತು ನಗದಿನ ನಿಖರ ಮಾಹಿತಿ ಲಭಿಸಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.