ಮಂಗಳೂರು, ಫೆ 10 (Daijiworld News/MSP): ನಗರದ ಪಂಪ್ವೆಲ್ ಪ್ಲೈಓವರ್ ನಲ್ಲಿ ಶನಿವಾರ ಸಂಜೆ ನಡೆದ ಅಪಘಾತಕ್ಕೆ ಕಾರಣವಾದ ಆಲ್ಟೋ 800 ಕಾರಿನಲ್ಲಿದ್ದವರ ಬಗ್ಗೆ ಮಾಹಿತಿ ನಿಗೂಢವಾಗಿದ್ದು, ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಯಾವುದೇ ಮಾಹಿತಿ ನೀಡುತ್ತಿಲ್ಲ.
ನಂತೂರು ಕಡೆಯಿಂದ ತೊಕ್ಕೊಟ್ಟು ಕಡೆಗೆ ತೆರಳುತ್ತಿದ್ದ ಆಲ್ಟೋ 800 ಕಾರು ಪಂಪ್ವೆಲ್ ಮೇಲ್ಸೆತುವೆ ದಾಟಿ ಮುಂದೆ ಹೋಗುತ್ತಿದ್ದಂತೆ ಅತಿ ವೇಗದಿಂದ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದ್ದು ಈ ವೇಳೆ ಎದುರಿನಿಂದ ಬರುತ್ತಿದ್ದ ಡಸ್ಟರ್ ಕಾರಿಗೆ ಢಿಕ್ಕಿ ಹೊಡೆದು ಅದರಲ್ಲಿ ಪ್ರಯಾಣಿಸುತ್ತಿದ್ದ ಪ್ರವೀಣ್ ಫರ್ನಾಂಡಿಸ್ (45) ಮೃತಪಟ್ಟಿದ್ದರು.
ಅಪಘಾತಕ್ಕೆ ಕಾರಣವಾದ ಆಲ್ಟೋ 800 ಕಾರಿನಲ್ಲಿ 5 ಜನ ಪ್ರಯಾಣಿಕರಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರೂ, ಇಬ್ಬರು ಗಾಯಾಳುಗಳಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇವರಲ್ಲಿ ಉಳಿದವರ ಬಗ್ಗೆ ಮಾಹಿತಿ ಕೇಳಿದರೆ ಯಾವುದೇ ಉತ್ತರ ನೀಡುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕಾರನ್ನು ಚಲಾಯಿಸುತ್ತಿದ್ದವರು ಯಾರು? ಅತಿ ವೇಗಕ್ಕೆ ಕಾರಣ ಏನು? ಯಾಕೆ ಮಾಹಿತಿ ನೀಡುತ್ತಿಲ್ಲ ? ಎನ್ನುವ ಸ್ಪಷ್ಟ ಮಾಹಿತಿ ಪೊಲೀಸರಿಗೂ ಲಭ್ಯವಾಗಿಲ್ಲ.