ಕಾರ್ಕಳ, ಫೆ.10 (DaijiworldNews/PY): ಕಾರ್ಕಳದ ನಕ್ರೆಯಿಂದ ಮೂಡುಬಿದಿರೆಯ ಅಲಂಗಾರ್ಗೆ ಮದುವೆ ದಿಬ್ಬಣ ಕರೆದುಕೊಂಡು ಹೋಗಿ ಹಿಂತಿರುಗಿದ್ದ ಸಂದರ್ಭ ವಾಹನದಲ್ಲಿ ಪತ್ತೆಯಾದ ಲಕ್ಷಾಂತರ ರೂ. ಬೆಲೆಬಾಳುವ ಚಿನ್ನಾಭರಣವನ್ನು ಪೊಲೀಸರ ಸಮ್ಮಖದಲ್ಲಿ ವಾಹನ ಮಾಲೀಕ ವಾರಸುದಾರರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಘಟನೆ ಸೋಮವಾರ ನಡೆದಿದೆ.
ಕುಕ್ಕುಂದೂರು ಜೋಡುರಸ್ತೆ ನಿವಾಸಿ ಲಿಯೋ ಫೆರ್ನಾಂಡಿಸ್ ಚಲಾಯಿಸುತ್ತಿದ್ದ ವಾಹನ ಮ್ಯಾಕ್ಸಿ ಕ್ಯಾಬ್ನಲ್ಲಿ ಫೆ.9 ಭಾನುವಾರದಂದು ಮದುವೆಯ ದಿಬ್ಬಣವು ಮೂಡಬಿದಿರೆ ಅಲಂಗಾರಿಗೆ ಹೋಗಿ ಬಂದಿತ್ತು. ಅದೇ ದಿನ ರಾತ್ರಿ ಲಿಯೋ ಫೆರ್ನಾಂಡಿಸ್ಗೆ ಕರೆಯೊಂದು ಬಂದಿದ್ದು, ದಿಬ್ಬಣಕ್ಕೆ ತೆರಳಿದ ಆಮಂತ್ರಿತರೊಬ್ಬರು ಚಿನ್ನಾಭರಣ ಕಳೆದುಕೊಂಡಿದ್ದಾರೆ. ಎಲ್ಲಿಕಳೆದುಕೊಂಡಿದ್ದಾರೆ ಎಂಬ ಮಾಹಿತಿ ಇಲ್ಲ ಅವರು ನಿಮ್ಮ ವಾಹನದಲ್ಲಿ ಅಲಂಗಾರಿಗೆ ಬಂದಿದ್ದಾರೆ. ಸಿಕ್ಕಿದಲ್ಲಿ ನೀಡುವಂತೆ ಕೋರಿದ್ದರು.
ಸೋಮವಾರ ಬೆಳಿಗ್ಗೆ ಲೀಯೋ ಫೆರ್ನಾಂಡಿಸ್ ತನ್ನ ಮ್ಯಾಕ್ಸಿ ಕ್ಯಾಬ್ನೊಳಗೆ ಹುಡುಕಾಡಿದಾಗ ಬ್ರಾಸ್ಲೆಟ್ ಪತ್ತೆಯಾಗಿತ್ತು. ಅದರಂತೆ ವಾರಸುದಾರರ ಗಮನಕ್ಕೂ ತಂದಿದ್ದರು.
ನಗರಠಾಣಾಧಿಕಾರಿ ಮಧು ಸಮ್ಮುಖದಲ್ಲಿ ವಾರಸುದಾರರ ವಿಲ್ಸನ್ ಡಿಸೋಜ ನಕ್ರೆ ಅವರಿಗೆ ಮ್ಯಾಕ್ಸಿ ಕ್ಯಾಬ್ನಲ್ಲಿ ಪತ್ತೆಯಾದ ರೂ.1,50,000 ಮೊತ್ತದ ಬ್ರಾಸ್ಲೆಟ್ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಈ ಸಂದರ್ಭ ಕಾರ್ಕಳ ನಗರ ಠಾಣಾಧಿಕಾರಿ ಮಧು ಅವರು ಟ್ಯಾಕ್ಸಿ ಚಾಲಕ ಕಂ ಮಾಲಕ ಲಿಯೋ ಫೆರ್ನಾಂಡಿಸ್ ಅವರಿಗೆ ಅಭಿನಂದನೆ ಸಲ್ಲಿಸಿದರು.
ಈ ವೇಳೆ ಆಟೋರಿಕ್ಷಾ ಚಾಲಕರ ಸಂಘಗಳ ಒಕ್ಕೂಟ ಉಡುಪಿ ಜಿಲ್ಲಾ ಕಾರ್ಯಾಧ್ಯಕ್ಷ ಸಂತೋಷ್ ರಾವ್, ಟ್ಯಾಕ್ಸಿ ಚಾಲಕರ ಸಂಘ ಕಾರ್ಕಳ ತಾಲೂಕು ಅಧ್ಯಕ್ಷ ದೀಪಕ್ ಹೆಗಡೆ, ಆಟೋರಿಕ್ಷಾ ಚಾಲಕ ಮಾಲಕರ ಸಂಘದ ಕಾರ್ಯದರ್ಶಿ ಅಣ್ಣಿ ಮಡಿವಾಳ ,ಟ್ಯಾಕ್ಸಿ ಚಾಲಕ ಗಣೇಶ್ ಹಾಗೂ ಇತರ ಟ್ಯಾಕ್ಸಿ ಚಾಲಕರು ಉಪಸ್ಥಿತರಿದ್ದರು.