ಕಾರ್ಕಳ, ಫೆ 07 : ಪತ್ನಿಯ ಕೈ ಕಾಲು ಕಡಿದು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಬಳಿಕ ಪರಾರಿಯಾಗಿದ್ದ ಪತಿಯನ್ನು ಭಟ್ಕಳ ರೈಲ್ವೆ ನಿಲ್ದಾಣದ ಬಳಿ ಉಡುಪಿ ಡಿಸಿಐಬಿ ತಂಡ ಮಂಗಳವಾರ ಬಂಧಿಸಿ ಅಜೆಕಾರು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಾರ್ಕಳದ ಕುಕ್ಕುದಡೆ ನಿವಾಸಿ ಅನುಶ್ರೀ (23) ಎಂಬವರನ್ನು ಜ 27 ರಂದು ತೆಳ್ಳಾರು, ಬಾಲಾಜೆ ಹೆರ್ಮುಡೆಯಲ್ಲಿರುವ ತನ್ನ ತವರು ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅಡ್ಡಗಟ್ಟಿದ ಪತಿ ಸಂತೋಷ್ ಕತ್ತಿಯಿಂದ ಕೈ ಕಾಲುಗಳಿಗೆ ಕಡಿದು ಪರಾರಿಯಾಗಿದ್ದನು. ಈ ಹಿನ್ನಲೆಯಲ್ಲಿ ಆತನ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದರು. ಇದೀಗ ಆತನನ್ನು ಭಟ್ಕಳ ರೈಲ್ವೆ ನಿಲ್ದಾಣದ ಬಳಿ ಬಂಧಿಸಿದ್ದಾರೆ.