ಕೊಣಾಜೆ, ಫೆ 11 (DaijiworldNews/SM): ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಮದರಸಕ್ಕೆ ತೆರಳುತ್ತಿದ್ದ ಮೂವರು ವಿದ್ಯಾರ್ಥಿನಿಗಳನ್ನು ಅಪಹರಣ ನಡೆಸಿ ಬಳಿಕ ಅತ್ಯಾಚಾರ ಹಾಗೂ ಕೊಲೆಗೆ ಯತ್ನಿಸಿರುವ ಆರೋಪ ಕೇಳಿಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಇಲ್ಲಿನ ಮಲಾರ್ ಉಗ್ಗನಬೈಲ್ ಬಳಿ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ, ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಕೋದಂಡರಾಮ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ. ಬಂಧಿತರನ್ನು ಪಾವೂರು ಉಗ್ಗನಬೈಲು ಸಮೀಪದ ಗುಣಪಾಲ, ಕಿರಣ್ ಕುಮಾರ್ ಹಾಗೂ ಸುಭಾಷ್ ಎಂದು ಗುರುತಿಸಲಾಗಿದೆ.
ಪಾವೂರು ಗ್ರಾಮದ ಮಲಾರದ ಮದರಸವೊಂದಕ್ಕೆ ಸೋಮವಾರದಂದು ಮೂವರು ಬಾಲಕಿಯರು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಮಲಾರ ಸೇತುವೆ ಬಳಿ ಕುಳಿತುಕೊಂಡಿದ್ದ ಮೂವರು ಬಂದು ವಿದ್ಯಾರ್ಥಿನಿಯರಲ್ಲಿ ಉಗ್ಗನಬೈಲ್ಗೆ ಹೋಗುವ ದಾರಿ ಕೇಳಿದ್ದರು. ಈ ಸಂದರ್ಭದಲ್ಲಿ ಬಾಲಕಿಯರು ದಾರಿ ತೋರಿಸುತ್ತಿದ್ದಾಗ ಆರೋಪಿಗಳಲ್ಲಿ ಓರ್ವ ಬಾಲಕಿಯ ಕೈಯನ್ನು ಗಟ್ಟಿ ಹಿಡಿದಿದ್ದು ಈ ಸಂದರ್ಬ ಆರೋಪಿಯ ಕೈಗೆ ಕಚ್ಚಿ ಮದರಸಕ್ಕೆ ಪರಾರಿಯಾಗಿ ಬಳಿಕ ಮದರಸದ ಗುರುಗಳಿಗೆ ಮಾಹಿತಿ ನೀಡಿದ್ದಳು. ಬಳಿಕ ಆರೋಪಿಗಳು ಅಲ್ಲಿದ್ದ ಉಳಿದ ಇಬ್ಬರು ವಿದ್ಯಾರ್ಥಿನಿಯರನ್ನು ಮೈಗೆ ಕೈ ಹಾಕಿ ಕೊಲೆ ಬೆದರಿಕೆಯೊಡ್ಡಿ ಅಲ್ಲಿಂದ ಪರಾರಿಯಾಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಕೊಣಾಜೆ ಠಾಣೆಗೆ ನೀಡಿದ ದೂರಿನಂತೆ ಕೊಣಾಜೆ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸಿದ್ದು, ಬಳಿಕ ಆರೋಪಿಗಳು ಪಾವೂರು ಗ್ರಾಮದ ಉಗ್ಗನಬೈಲ್ ಪ್ರದೇಶದಲ್ಲಿ ಇದ್ದಾರೆ ಎಂಬ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ತೆರಳಿದಾಗ ಇಬ್ಬರು ಆರೋಪಿಗಳು ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ ಎನ್ನಲಾಗಿದೆ. ಬಳಿಕ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಬಳಿಕ ಇನ್ನೋರ್ವ ಆರೋಪಿಯನ್ನು ನೀರುಮಾರ್ಗದ ವಾಂಟೆಮಾರ್ ಎಂಬಲ್ಲಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಘಟನೆಗೆ ಸಂಬಂಧಿಸಿ ಪೊಲೀಸರು ಆರೋಪಿಗಳ ಮೇಲೆ ಅಪಹರಣ ಯತ್ನ, ಅತ್ಯಾಚಾರ ಯತ್ನ, ಕೊಲೆಯತ್ನ ಕೇಸು ಸೇರಿದಂತೆ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ. ಮದರಸ ವಿದ್ಯಾರ್ಥಿನಿಯರ ಮೇಲೆ ನಡೆದ ದುಷ್ಕøತ್ಯದ ಬಗ್ಗೆ ಪರಿಸರದಲ್ಲಿ ಸುದ್ದಿ ಹರಡುತ್ತಿದ್ದಂತೆ ಸೋಮವಾರ ರಾತ್ರಿ ನಾಗರಿಕರು ಜಮಾವಣೆಗೊಂಡು ಆರೋಪಿಗಳ ಪತ್ತೆಗಾಗಿ ಒತ್ತಾಯಿಸಿದ್ದರು. ಸ್ಥಳದಲ್ಲಿ ಪೊಲೀಸರು ಬಿಗಿಬಂದೋಬಸ್ತ್ ಏರ್ಪಡಿಸಿದ್ದರು.