ಬೆಳ್ತಂಗಡಿ, ಫೆ 11 (DaijiworldNews/SM): ಮಹಿಳೆಯರು ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಬೇಕು. ಹೆಣ್ಣು ಮಕ್ಕಳಂತೆ ಗಂಡು ಮಕ್ಕಳಿಗೂ ಸಮಾನವಾಗಿ ಎಚ್ಚರಿಕೆ, ಮಾರ್ಗದರ್ಶನ ನೀಡಬೇಕು. ಎಲ್ಲಾ ಗ್ರಾಮಗಳು ವ್ಯಸನ ಮುಕ್ತ ಗ್ರಾಮಗಳಾದಾಗ ಮಾತ್ರ ಮಹಿಳೆಯರು ಶಾಂತಿ, ನೆಮ್ಮದಿಯ ಜೀವನ ನಡೆಸಬಹುದು. ಅದು ಅವರಿಗೆ ನಾವು ನ್ಯಾಯ ಒದಗಿಸಿದಂತಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅನ್ನಾಸಾಹೇಬ್ ಹೇಳಿದರು.
ಅವರು ಮಂಗಳವಾರ ಧರ್ಮಸ್ಥಳದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ನಡೆದ ವ್ಯಸನಮುಕ್ತ ಸಾಧಕರ ಸಮಾವೇಶ ಮತ್ತು ಶತದಿನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಆಡು ಮುಟ್ಟದ ಸೊಪ್ಪಿಲ್ಲ, ಡಿ. ವೀರೇಂದ್ರ ಹೆಗ್ಗಡೆಯವರು ಮಾಡದ ಸೇವಾ ಕ್ಷೇತ್ರವಿಲ್ಲ ಎಂದು ಹೇಳಿದ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ನವಜೀವನ ಸಮಿತಿ ಆಶ್ರಯದಲ್ಲಿ ಹೆಗ್ಗಡೆಯವರು ಹಮ್ಮಿಕೊಂಡ ಸಮಾಜಮುಖಿ ಕಾರ್ಯಗಳು ಹಾಗೂ ವ್ಯಸನಮುಕ್ತ ಆರೋಗ್ಯ ಪೂರ್ಣ ಸಮಾಜ ರೂಪಿಸುವ ಕಾರ್ಯ ಸ್ತುತ್ಯಾರ್ಹವಾಗಿದೆ. ಕಿರು ಆರ್ಥಿಕ ಯೋಜನೆ ಮೂಲಕ ಸ್ವ-ಸಹಾಯ ಸಂಘಗಳ ಸಹಭಾಗಿತ್ವದಲ್ಲಿ ಮಹಿಳೆಯರು ಇಂದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಶೇಕಡಾ ನೂರು ಸಾಲ ಮರು ಪಾವತಿಯಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾನಸಿಕ ಒತ್ತಡ, ವ್ಯವಹಾರದಲ್ಲಿ ಸೋಲು, ನಷ್ಟ, ಸಹವಾಸ ದೋಷ, ಆರೋಗ್ಯ ಸಮಸ್ಯೆ ಇತ್ಯಾದಿ ಹತ್ತು-ಹಲವು ಕಾರಣಗಳಿಂದ ಜನರು ಜಾತಿ-ಮತ, ಲಿಂಗ, ವಯಸ್ಸಿನ ಭೇದವಿಲ್ಲದೆ ಮದ್ಯಪಾನ ಚಟಕ್ಕೆ ಬಲಿಯಾಗುತ್ತಾರೆ. ಭಾರತದ ಆದ್ಯಾತ್ಮಿಕತೆ, ಸಂಸ್ಕೃತಿ-ಸಂಸ್ಕಾರ ಹಾಗೂ ಕುಟುಂಬ ಜೀವನ ಪದ್ಧತಿ ವಿಶ್ವಕ್ಕೆ ಮಾದರಿಯಾಗಿದೆ. ಮನೆಯಲ್ಲಿ ಸ್ವರ್ಗ-ನರಕ ಎರಡೂ ಇದೆ. ಗಂಡ-ಹೆಂಡತಿ ಹಾಗೂ ಕುಟುಂಬದ ಸದಸ್ಯರೆಲ್ಲರೂ ಪರಸ್ಪರ ಪ್ರೀತಿ-ವಿಶ್ವಾಸದಿಂದ ಅನ್ಯೋನ್ಯತೆಯಿಂದ ಸೌಹಾರ್ದಯುತ ಜೀವನ ನಡೆಸಿದರೆ ಮನೆಯಲ್ಲೆ ಸ್ವರ್ಗ ಸುಖ ಅನುಭವಿಸಬಹುದು. ಆಗ ಮನೆಯೇ ಮಂತ್ರಾಲಯವಾಗುತ್ತದೆ. ಮನಸೇ ದೇವಾಲಯವಾಗುತ್ತದೆ. ಪರಸ್ಪರ ಅನ್ಯೋನ್ಯತೆ, ಹೊಂದಾಣಿಕೆ ಹಾಗೂ ಪ್ರೀತಿ-ವಿಶ್ವಾಸ ಇಲ್ಲವಾದಲ್ಲಿ ಮನೆಯೇ ನರಕ ಸದೃಶವಾಗುತ್ತದೆ ಎಂದು ಸಚಿವೆ ಅಭಿಪ್ರಾಯಪಟ್ಟರು.
ಇನ್ನು ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ವ್ಯಸನಮುಕ್ತರು ಕಾಯಾ, ವಾಚಾ, ಮನಸಾ, ಪರಿಶುದ್ಧರಾಗಿ ಶ್ರೀ ಮಂಜುನಾಥ ಸ್ವಾಮಿಯದರ್ಶನ ಮಾಡಿ, ಆಶೀರ್ವಾದ ಪಡೆದು ಪವಿತ್ರಾತ್ಮರಾಗಿದ್ದೀರಿ.ಮುಂದೆದೃಢ ಸಂಕಲ್ಪದಿಂದಅಂತರಂಗ-ಬಹಿರಂಗ ಪರಿಶುದ್ಧರಾಗಿಆರೋಗ್ಯಪೂರ್ಣಜೀವನ ನಡೆಸಬೇಕುಎಂದು ಸಲಹೆ ನೀಡಿದರು.