ಉಡುಪಿ, ಫೆ 12 (Daijiworld News/MB) : ನವಿಮುಂಬೈಯ ಮಾಯಾ ಬಾರ್ ಮಾಲಕ ವಶಿಷ್ಠ ಸತ್ಯನಾರಾಯಣ ಯಾದವ್ (45) ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಂಗಳವಾರ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ದೆಹಲಿಯ ಹುಸಮನ್ಪುರ ನಿವಾಸಿ ಸುಮಿತ್ ಮಿಶ್ರ (23), ಸುರತ್ಕಲ್ ಚೊಕ್ಕಬೆಟ್ಟುವಿನ ಅಬ್ದುಲ್ ಶುಕೂರ್ ಯಾನೆ ಅದ್ದು (35), ಮಂಗಳೂರು ತೆಂಕಮಿಜಾರು ಗ್ರಾಮದ ಕಂದಾಲ್ಬೆಟ್ಟುವಿನ ಅವಿನಾಶ್ ಕರ್ಕೇರ (25), ಕರಂಬಳ್ಳಿ ಜನತಾ ಕಾಲನಿಯ ಮುಹಮ್ಮದ್ ಶರೀಫ್(32) ಎಂದು ಗುರುತಿಸಿಲಾಗಿದೆ. ಹಾಗೆಯೇ ಕೃತ್ಯಕ್ಕೆ ಬಳಸಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ವಶಿಷ್ಟ ಅವರು ಫೆ.4 ರಂದು ಮುಂಬೈನಿಂದ ಉಡುಪಿಗೆ ಬಂದು ಅಲ್ಲಿನ ಲಾಡ್ಜ್ ಒಂದರಲ್ಲಿ ಗೆಳೆಯರೊಂದಿಗೆ ತಂಗಿದ್ದರು. ಫೆ.9 ರಂದು ರಾತ್ರಿ ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಹಿಂಬದಿಯಲ್ಲಿ ಕುಳಿತ್ತಿದ್ದ ಮೂವರು ಆರೋಪಿಗಳು , ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದ ವಶಿಷ್ಠ ಸತ್ಯನಾರಾಯಣ ಯಾದವ್ ಅವರ ಕುತ್ತಿಗೆಯನ್ನು ಬಿಗಿದು ಹತ್ಯೆ ಮಾಡಿದ್ದಾರೆ ಎಂದು ತನಿಖೆಯ ವೇಳೆ ತಿಳಿದು ಬಂದಿದೆ. ಆ ಬಳಿಕ ಮೃತದೇಹವನ್ನು ಬೆಳ್ಳಂಪಳ್ಳಿಯ ದೊಡ್ಡಣಗುಡ್ಡೆ ಎಂಬಲ್ಲಿ ಎಸೆದು ಪರಾರಿಯಾಗಿದ್ದರು. ಫೆ.10 ರಂದು ಪೊದೆಯಲ್ಲಿ ಪತ್ತೆಯಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಎಸ್ಪಿ ವಿಷ್ಣವರ್ಧನ್, ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಹಾಗೂ ಹಿರಿಯಡ್ಕ ಎಸ್ಐ ಸುಧಾಕರ್ ತೋನ್ಸೆ ವಿಶೇಷ ತಂಡವನ್ನು ರಚನೆ ಮಾಡಿದ್ದು, ತನಿಖೆ ನಡೆಸಿದ ತಂಡ ಆರೋಪಿಗಳನ್ನು ಬಂಧನ ಮಾಡಿದ್ದಾರೆ. ವ್ಯಾಪಾರದ ವಿಷಯದಲ್ಲಿ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಬಂಧಿತರಲ್ಲಿ ಸುಮಿತ್ ಮಿಶ್ರ, ವಶಿಷ್ಠ ಅವರ ಮಾಯ ಬಾರ್ನ ಉದ್ಯೋಗಿಯಾಗಿದ್ದು ಮೂರು ತಿಂಗಳ ಹಿಂದೆ ವಶಿಷ್ಠರೊಂದಿಗೆ ಜಗಳ ಮಾಡಿ ಕೆಲಸ ಬಿಟ್ಟಿದ್ದನು. ಉಳಿದ ಮೂವರು ಆರೋಪಿಗಳು ಎಕೆಎಂಎಸ್ ಬಸ್ನಲ್ಲಿ ಉದ್ಯೋಗಿಯಾಗಿದ್ದಾರೆ.
ಎಸ್ಪಿ ವಿಷ್ಣವರ್ಧನ, ಹೆಚ್ಚುವರಿ ಎಸ್ಪಿ ಕುಮಾರ ಚಂದ್ರ ಹಾಗೂ ಉಡುಪಿ ಡಿವೈಎಸ್ಪಿ ಜೈ ಶಂಕರ್ ಮಾರ್ಗದರ್ಶನದಲ್ಲಿ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಹಾಗೂ ಹಿರಿಯಡ್ಕ ಪೊಲೀಸ್ ಉಪನಿರೀಕ್ಷಕ ಸುಧಾಕರ ತೋನ್ಸೆ ಹಾಗೂ ಎಎಸ್ಐ ಗಂಗಪ್ಪ. ಸಿಬ್ಬಂದಿಗಳಾದ ಜಯಂತ, ಯಶವಂತ್. ರಘು. ಸದಾಶಿವ, ದಿನೇಶ್ ಭೀಮಪ್ಪ, ಇಂದ್ರೇಶ್, ನಿತಿನ್, ಬಸವರಾಜ್, ಆಂದ್,ರಾಕೇಶ್ ಶೆಟ್ಟಿ ಕಾರ್ಯಾಚರಣೆ ನಡೆಸಿದ್ದಾರೆ.