ಮೂಡುಬಿದಿರೆ, ಫೆ.12 (DaijiworldNews/PY): "ಪ್ರತಿಯೊಂದು ಊರಿನ ಹಿಂದೆ ಒಂದು ಆಧ್ಯಾತ್ಮ ಶಕ್ತಿ ಇದೆ. ಕರಿಂಜೆ ಎನ್ನುವ ಹೆಸರಿನೊಳಗೂ ಆಧ್ಯಾತ್ಮ ಇದೆ. ಕರಿ ಅಂದರೆ ಆನೆ. ಆನೆಯನ್ನು ಜಯಸಿದ ಊರೇ ಕರಿಂಜೆ. ಈ ಪದವನ್ನು ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿಗಳಿಗೆ ಅನ್ವಯ ಮಾಡಬೇಕು. ಅವರು ಆನೆಯನ್ನೇ ಜಯಿಸಿದ ಸಾಧನೆ ಮಾಡಿದ್ದಾರೆ. ಪರಮಪವಿತ್ರವಾಗಿರುವ ಈ ಕ್ಷೇತ್ರದಲ್ಲಿ ಅದ್ಭುತವಾದ ದೇವಸ್ಥಾನವನ್ನು ಕಟ್ಟಿದ್ದಾರೆ. ಇಷ್ಟೊಂದು ದೊಡ್ಡ ಕೆಲಸ ಮಾಡುವುದು ಸುಲಭದ ಮಾತಲ್ಲ" ಎಂದು ಶ್ರೀ ಕ್ಷೇತ್ರ ಕಟೀಲಿನ ಕಮಲಾದೇವಿ ಪ್ರಸಾದ ಆಸ್ರಣ್ಣ ನುಡಿದರು.
ಅವರು ಮೂಡುಬಿದಿರೆ ಕರಿಂಜೆಯ ಶ್ರೀ ಲಕ್ಷ್ಮೀ ಸತ್ಯನಾರಾಯಣ ವೀರಾಂಜನೇಯ ಸ್ವಾಮಿ ಸನ್ನಿಧಿಯಲ್ಲಿ ನೂತನ ಗರ್ಭಗುಡಿಯಲ್ಲಿ ಶ್ರೀ ದೇವರ ಪುನರ್ ಪ್ರತಿಷ್ಠೆ, ಅಷ್ಟಬಂಧ ಅಷ್ಟೋತ್ತರ ಸಹಸ್ರ ಬ್ರಹ್ಮಕಲಶಾಭೀಷೇಕ ಅಷ್ಟಪವಿತ್ರ ನಾಗಮಂಡಲ ಹಾಗೂ ಜಾತ್ರಾ ಮಹೋತ್ಸವದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ, ಅನುಗ್ರಹ ಸಂದೇಶ ನೀಡಿದರು.
"ಧಾರ್ಮಿಕ ನಾಯಕರು ಸಮಾಜಮುಖಿಯಾಗಿ ಬೆಳೆಯಬೇಕು. ರಾಮ, ಕೃಷ್ಣರು ಸಮಾಜಮುಖಿಯಾದ ದೇವರು. ಎಷ್ಟೇ ಸಮಸ್ಯೆಗಳು ಬಂದಾಗಲೂ ಅವರು ಪಶು, ಪಕ್ಷಿ, ಪ್ರಾಣಿ, ಬಡವರಿಂದ ದೂರ ಹೋದವರಲ್ಲ. ಸಮಾಜಮುಖಿ ಸ್ವಾಮೀಜಿಗಳು ಇದ್ದಲ್ಲಿ ಮಾತ್ರ ಹಿಂದೂ ಸಮಾಜ ಉಳಿಯಲು ಸಾಧ್ಯ" ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಬಲ್ಯೊಟ್ಟುವಿನ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ಕರಿಂಜೆ ಶ್ರೀಗಳು ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಧಾರ್ಮಿಕ ಸಭೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಾಟ್ಯೋಲ್ಲಾಸಂ ನೃತ್ಯವೈಭವ ಜರುಗಿತು.
ಅಧ್ಯಕ್ಷತೆಯನ್ನು ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ ಎಂ ವಹಿಸಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಶಾಸಕ ಅಭಯಚಂದ್ರ ಜೈನ್, ವಿಶ್ವಹಿಂದು ಪರಿಷತ್ನ ಎಂ ಬಿ ಪುರಾಣಿಕ್, ಉದ್ಯಮಿ ಶ್ರೀಪತಿ ಭಟ್, ಸಂಘಟಕ ಸತ್ಯಜಿತ್ ಸುರತ್ಕಲ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ ಮೊದಲಾದವರಿದ್ದರು.