ಉಳ್ಳಾಲ, ಫೆ.12 (DaijiworldNews/PY): ಬಸ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಲಾರಿ ಚಾಲಕ ಬುಧವಾರ ಬೆಳಿಗ್ಗೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಮೃತಪಟ್ಟ ಲಾರಿ ಚಾಲೊಕನನ್ನು ಬೆಳಗಾವಿಯ ಓಬಳಾಪುರದ ಕಿರಣ್ ರಾಥೋಡ್ (22) ಎಂದು ಗುರುತಿಸಲಾಗಿದೆ. ಬೆಳಗಾವಿಯಿಂದ ಸ್ಟೀಲ್ ಲೋಡ್ ಅನ್ನು ಕಾಸರಗೋಡಿಗೆ ತಂದಿದ್ದ ಕಿರಣ್ ರಾಥೋಡ್ ಅವರು ಪುನಃ ವಾಪಾಸಾಗುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ.
ತಲಪಾಡಿ ಟೋಲ್ ಗೇಟ್ ಎದುರುಗಡೆ ಲಾರಿ ನಿಲ್ಲಿಸಿ ಚಹಾ ಕುಡಿಯಲೆಂದು ರಸ್ತೆಯಲ್ಲಿದ್ದ ಸಂದರ್ಭ ಖಾಸಗಿ ಸಿಟಿ ಬಸ್ಸ್ ಢಿಕ್ಕಿ ಹೊಡೆದಿತ್ತು. ತಲಪಾಡಿಯಿಂದ ಮಂಗಳೂರಿಗೆ ತೆರಳಲು ಪ್ರಯಾಣಿಕರನ್ನು ಹತ್ತಿಸುವ ಭರಾಟೆಯಲ್ಲಿ ಒಮ್ಮಿಂದೊಮ್ಮೆಲೇ ಚಾಲಕ ಬಸ್ಸನ್ನು ತಿರುಗಿಸಿದ ಪರಿಣಾಮವಾಗಿ ರಸ್ತೆ ಬದಿಯಲ್ಲಿದ್ದ ಲಾರಿ ಚಾಲಕನಿಗೆ ಢಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ಪರಿಣಾಮ ಕಿರಣ್ ರಾಥೋಡ್ ಅವರ ತಲೆಗೆ ಗಂಭೀರ ಗಾಯವಾಗಿತ್ತು, ತಕ್ಷಣ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆಯ ಬಗ್ಗೆ ಮಂಗಳೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.