ಮಂಗಳೂರು, ಫೆ.12 (DaijiworldNews/PY): ಚುನಾವಣೆ ನಡೆದು ಸುಮಾರು ತಿಂಗಳ ಬಳಿಕ ಮಂಗಳೂರು ಮಹಾ ನಗರ ಪಾಲಿಕೆಗೆ ನೂತನ ಮೇಯರ್ ಹಾಗೂ ಉಪ ಮೇಯರ್ ಆಯ್ಕೆ ಚುನಾವಣೆ ದಿನಾಂಕ ನಿಗದಿಯಾಗಿದ್ದು, ಫೆಬ್ರವರಿ 28ರಂದು ಆಯ್ಕೆ ನಡೆಯಲಿದೆ.
ಪಾಲಿಕೆಯಲ್ಲಿ ಬಹುಮತ ಪಡೆದಿರುವ ಬಿಜೆಪಿಯಿಂದ ಹಿಂದುಳಿದ ವರ್ಗ ಎ ಹಾಗೂ ಉಪ ಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಸ್ಪರ್ಧಿಸಲಿದ್ದಾರೆ. ಮೇಯರ್ ಸ್ಥಾನಕ್ಕೆ 46ನೇ ಕಂಟೋನ್ಮೆಂಟ್ ವಾರ್ಡ್ನ ಬಿಜೆಪಿಯ ದಿವಾಕರ ಪಾಂಡೇಶ್ವರ ಅವರು ಬಹುತೇಕವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಉಳಿದಂತೆ ಕಾರ್ಪೋರೇಟರ್ಗಳಾದ ಶರತ್, ಜಯಾನಂದ ಅಂಚನ್ ಸೇರಿದಂತೆ ಹಲವರ ಹೆಸರು ಕೇಳಿಬರುತ್ತಿದೆ.
2019ರ ನ.12ರಂದು ಪಾಲಿಕೆ ಚುನಾವಣೆ ನಡೆದು, ನ.14ರಂದು ಫಲಿತಾಂಶ ಪ್ರಕಟವಾಗಿತ್ತು. ಮಹಾನಗರ ಪಾಲಿಕೆಯ 60 ವಾರ್ಡ್ಗಳಲ್ಲಿ 44 ಸ್ಥಾನಗಳಲ್ಲಿ ಬಿಜೆಪಿ ಜಯ ಸಾಧಿಸಿತ್ತು. ಆದರೆ, ಮೇಯರ್ ಮೀಸಲಾತಿ ಕುರಿತಂತೆ ನಡೆದಿದ್ದ ಗೊಂದಲದ ಕಾರಣದಿಂದ ಮೂರು ತಿಂಗಳಿನಿಂದ ಮೇಯರ್ ಹಾಗೂ ಉಪ ಮೇಯರ್ ಆಯ್ಕೆ ನಡೆದಿರಲಿಲ್ಲ.
ಪ್ರಾದೇಶಿಕ ಆಯುಕ್ತರು ಫೆ.28ಕ್ಕೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಡೆಸುವ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಫೆ.11 ಮಂಗಳವಾರದಂದು ಪತ್ರದ ಮೂಲಕ ತಿಳಿಸಿದ್ದಾರೆ. ಫೆ.28ಕ್ಕೆ ಪೂರ್ವಾಹ್ನ 11:30ಕ್ಕೆ ಚುನಾವಣಾ ಪ್ರಕ್ರಿಯೆ ನಡೆಯಲಿದೆ. ಆರಂಭದಲ್ಲಿ ಪಾಲಿಕೆಗೆ ನೂತನವಾಗಿ ಆಯ್ಕೆಯಾಗಿರುವ 60 ಕಾರ್ಪೊರೇಟರ್ಗಳ ಪ್ರಮಾಣ ವಚನ ಸ್ವೀಕಾರ ನಡೆಯಲಿದ್ದು, ಪಾಲಿಕೆ ಹೊಸ ಪರಿಷತ್ ಅಸ್ತಿತ್ವಕ್ಕೆ ಬರಲಿದೆ. ಬಳಿಕ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಡೆಯಲಿದೆ. ನಂತರ ಅಗತ್ಯವಿದ್ದರೆ ಸ್ಥಾಯಿ ಸಮಿತಿಗಳಿಗೆ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಕಳೆದ ಅವಧಿಯಲ್ಲಿ ಪಾಲಿಕೆಯಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್ 14 ಸ್ಥಾನ ಪಡೆದುಕೊಂಡಿದ್ದು, ಕಳೆದ ಬಾರಿ ಒಂದು ಸ್ಥಾನವನ್ನು ಹೊಂದಿದ್ದ ಎಸ್ಡಿಪಿಐ ಈ ಬಾರಿ 2 ಸ್ಥಾನಗಳೊಂದಿಗೆ ವಿಪಕ್ಷ ಸ್ಥಾನದಲ್ಲಿ ಇರಲಿದೆ.