ಸುಬ್ರಹ್ಮಣ್ಯ, ಫೆ.12 (DaijiworldNews/PY): ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅತ್ಯಾಚಾರವೆಸಗಿದ ಆರೋಪದಲ್ಲಿ ಸುಬ್ರಹ್ಮಣ್ಯ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿರುವುದಾಗಿ ವರದಿಯಾಗಿದೆ.
ಸಂಕೇತ್, ವೆಂಕಟೇಶ್, ಡಿಕೇಶ್, ಅಶೋಕ್ ಬಂಧಿತ ಆರೋಪಿಗಳು. ನಾಲ್ವರು ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಕರಣದ ಮತ್ತಿಬ್ಬರು ಆರೋಪಿಗಳಾದ ಚಂದ್ರಶೇಖರ ಹಾಗೂ ದುರ್ಗಾಪ್ರಸಾದ್ ತಲೆಮರೆಸಿಕೊಂಡಿದ್ದಾರೆ.
ಬಾಲಕಿಯನ್ನು ಕೆಲವು ಯುವಕರು ಅತ್ಯಾಚಾರವೆಸಗಿ, ಆಕೆ ಗರ್ಭವತಿಯಾದಾಗ ಗರ್ಭಪಾತವಾಗುವಂತೆ ಮಾಡಲು ಬೇರೆ ಬೇರೆ ರೀತಿಯ ಮಾತ್ರೆಗಳನ್ನು ನುಂಗಲು ನೀಡಿದ್ದರೆಂದು ಆರೋಪಿಸಲಾಗಿದೆ. ಇದರ ಪರಿಣಾಮ ಬಾಲಕಿಗೆ ತೀವ್ರ ರಕ್ತಸ್ರಾವ ಆರಂಭವಾಯಿತೆನ್ನಲಾಗಿದೆ. ಈ ವಿಚಾರ ಬಾಲಕಿಯ ಮನೆಯವರಿಗೆ ಗಮನಕ್ಕೆ ಬಂದಿದ್ದು, ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ, ಪೊಲೀಸ್ ದೂರು ನೀಡಿದ್ದಾರೆ ಎನ್ನಲಾಗಿದೆ.
ಮೊದಲು ಸಂಕೇತ್ ಹಾಗೂ ವೆಂಕಟೇಶ್ ಎಂಬವರ ಮೇಲೆ ದೂರು ನೀಡಿದ್ದು, ಬಾಲಕಿಯ ವಿಚಾರಣೆ ಸಂದರ್ಭ ದುರ್ಗಾಪ್ರಸಾದ್, ಚಂದ್ರಶೇಖರ, ಡಿಕೇಶ್, ಅಶೋಕ್ ಎಂಬವರ ಹೆಸರುಗಳನ್ನೂ ಹೇಳಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಘಟನೆಯ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ.