ಮಂಗಳೂರು, ಫೆ 12 (Daijiworld News/MB) : ನಗರದ ಮಿನಿ ವಿಧಾನಸೌಧ ಪಕ್ಕದಲ್ಲಿ ಸುಮಾರು 4.25 ಕೋಟಿ ರೂಪಾಯಿ ಅನುದಾನದಲ್ಲಿ ನಿರ್ಮಾಣಗೊಂಡಿರುವ ಮಂಗಳೂರು ತಾಲೂಕು ಪಂಚಾಯತ್ನ ನೂತನ ಕಟ್ಟಡ ಇಂದು ಬೆಳಗ್ಗೆ ಉದ್ಘಾಟನೆಯಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ನೂತನ ಕಟ್ಟಡದ ಉದ್ಘಾಟನೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಯು.ಟಿ.ಖಾದರ್, ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಉಮಾನಾಥ್ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಐವನ್ ಡಿಸೋಜ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಂಗಳೂರು ತಾ.ಪಂ. ಅಧ್ಯಕ್ಷ ಮೊಹಮ್ಮದ್ ಮೋನು, ಉಪಾಧ್ಯಕ್ಷೆ ಪೂರ್ಣಿಮಾ ಪೂಜಾರಿ, ಕಾರ್ಯನಿರ್ವಾಹಕ ಅಧಿಕಾರಿ ಜಿ. ಸದಾನಂದ, ಇಂಜಿನಿಯರ್ ಪ್ರದೀಪ್ ಭಟ್ ಮತ್ತಿತರರು ಉಪಸ್ಥಿತರಿದ್ದರು.
2017ರ ಮೇ ತಿಂಗಳಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮಾನಾಥ್ ರೈ ಹಾಗೂ ಶಾಸಕ ಯುಟಿ ಖಾದರ್ ಅವರು ತಾಲೂಕು ಪಂಚಾಯತ್ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೇರವೇರಸಿದ್ದರು. ಇದೀಗ ಜಿಲ್ಲಾ ಪಂಚಾಯತ್ನ ಅನುದಾನದಲ್ಲಿ ಕಟ್ಟಡ ಸರ್ವ ವ್ಯವಸ್ಥೆಯೊಂದಿಗೆ ಉದ್ಘಾಟನೆಯಾಗಿದೆ.
ಬೇಸ್ಮೆಂಟ್ ಸೇರಿ ಒಟ್ಟು ಮೂರು ಅಂತಸ್ತುಗಳಿವೆ. ಬೇಸ್ಮೆಂಟ್ನಲ್ಲಿ ಪಾರ್ಕಿಂಗ್ಗೆ ಅವಕಾಶ ಕಲ್ಪಿಸಲಾಗಿದ್ದು ತಳ ಅಂತಸ್ತಿನಲ್ಲಿ ಆಡಳಿತ ಕಚೇರಿ, ಕಾರ್ಯನಿರ್ವಹಣಾಧಿಕಾರಿ ಕಚೇರಿ, ಅಕೌಂಟ್ ಸೆಕ್ಷನ್ ಕಾರ್ಯ ನಿರ್ವಹಿಸಲಿದೆ.
ಮೊದಲ ಮಹಡಿಯಲ್ಲಿ ಅಧ್ಯಕಷ, ಉಪಾಧ್ಯಕ್ಷರ ಕೊಠಡಿ, ಸ್ಥಾಯಿ ಸಮಿತಿ ಮೀಟಿಂಗ್ ಹಾಲ್, ಅಕ್ಷರ ದಾಸೋಹ ಕಚೇರಿಯಿದೆ.
ಎರಡನೇ ಮಹಡಿಯಲ್ಲಿ 600 ಚದರ ಅಡಿ ವಿಸ್ತೀರ್ಣದ 300 ಜನರು ಆಸೀನರಾಗಬಹುದಾದಂತ ಮೀಟಿಂಗ್ ಹಾಲ್ ವ್ಯವಸ್ಥೆ ಮಾಡಲಾಗಿದೆ.
ತಳ ಅಂತಸ್ತಿನ ರಸ್ತೆಬದಿಯಲ್ಲಿ ಆರು ಅಂಗಡಿಗಳ ವಾಣೀಜ್ಯ ಸಂಕೀರ್ಣವನ್ನು ನಿರ್ಮಾಣ ಮಾಡಲಾಗಿದೆ.