ಬಂಟ್ವಾಳ, ಫೆ.12 (DaijiworldNews/PY): ಫಲ್ಗುಣಿ ನದಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮರಳುಗಾರಿಕೆಗೆ ಕಂದಾಯ, ಗಣಿ ಹಾಗೂ ಪೊಲೀಸ್ ಇಲಾಖೆಯ ಅಬಕಾರಿಗಳ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಬೋಟ್, ಲಾರಿ ಹಾಗೂ ಹಿಟಾಚಿಯನ್ನು ತಾತ್ಕಾಲಿಕ ನೆಲೆಯಲ್ಲಿ ವಶಪಡಿಸಿಕೊಂಡ ಘಟನೆ ಬುಧವಾರ ಕರಿಯಂಗಳದಲ್ಲಿ ನಡೆದಿದೆ.
ಮರಳುಗಾರಿಕೆ ನಡೆಸುವ ಕುರಿತು ವ್ಯಕ್ತಿಯೊಬ್ಬರಿಗೆ ಬಡಗಬೆಳ್ಳೂರಿನಲ್ಲಿ ಟೆಂಡರ್ ಆಗಿದ್ದು, ಆದರೆ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳ ಕರಿಯಂಗಳವಾಗಿದ್ದ ಹಿನ್ನೆಲೆಯಲ್ಲಿ ಅಬಕಾರಿಗಳು ದಾಳಿ ನಡೆಸಿದ್ದರು. ರಸ್ತೆಯ ತೊಂದರೆಯ ಹಿನ್ನೆಲೆಯಲ್ಲಿ ಗಣಿ ಇಲಾಖೆಯ ಅನುಮತಿ ಪಡೆದೇ ಅಧಿಕೃತ ಸ್ಥಳದಿಂದ ತಂದು ಇಲ್ಲಿ ಲೋಡ್ ಮಾಡಲಾಗುತ್ತಿದೆ ಎಂದು ಮರಳುಗಾರಿಕೆ ನಡೆಸುತ್ತಿದ್ದವರು ತಿಳಿಸಿದ್ದು, ಹೀಗಾಗಿ ಸೊತ್ತುಗಳನ್ನು ತಾತ್ಕಾಲಿಕ ನೆಲೆಯಲ್ಲಿ ವಶಪಡಿಸಿಕೊಳ್ಳಲಾಗಿದೆ.
ದಾಳಿಯ ವೇಳೆ ಅಲ್ಲಿದ್ದ ಕಾರ್ಮಿಕರು ಪರಾರಿಯಾಗಿದ್ದು, ಒಟ್ಟು 11 ಬೋಟ್ಗಳು, 6 ಲಾರಿಗಳು ಹಾಗೂ ಒಂದು ಹಿಟಾಚಿ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ. ಪ್ರಸ್ತುತ ಸೊತ್ತುಗಳನ್ನು ತಾತ್ಕಾಲಿಕ ನೆಲೆಯಲ್ಲಿ ವಶಪಡಿಸಿಕೊಂಡಿದ್ದು, ಗಣಿ ಇಲಾಖೆಯವರು ಪರಿಶೀಲಿಸಿ ಕ್ರಮಕೈಗೊಳ್ಳಲಿದ್ದಾರೆ ಎಂದು ತಹಶೀಲ್ದಾರ್ ರಶ್ಮಿ ಅವರು ತಿಳಿಸಿದ್ದಾರೆ.