ಉಡುಪಿ, ಫೆ 12 (DaijiworldNews/SM): ಬ್ರಹ್ಮಾವರ ತಾಲೂಕು ಆಗಲು ಬೇಡಿಕೆ ಇದ್ದು ಅನೇಕ ವರ್ಷಗಳ ನಂತರ ತಾಲೂಕಾಗಿ ಘೋಷಣೆ ಮಾಡಲಾಯಿತು. ಆದರೆ ಬ್ರಹ್ಮಾವರವನ್ನು ಪುರಸಭೆ ಮಾಡುವ ಎಲ್ಲಾ ಅರ್ಹತೆಗಳಿದ್ದು ಪುರಸಭೆ ಮಾಡಬೇಕೆಂದು ಸರಕಾರದ ಮುಂದೆ ಪ್ರಸ್ತಾವನೆ ಇಡಲಾಗಿತ್ತಾದರೂ ಈಡೇರಿರಲಿಲ್ಲ. ಆದರೆ ಈ ಬಾರಿ ಮುಖ್ಯಮಂತ್ರಿ ಯಡಿಯೂರಪ್ಪ ಪುರಸಭೆ ಮಾಡುವಂತೆ ಆದೇಶ ನೀಡಿದ್ದು, ಅಧಿಕೃತ ಕಾಗದ ಪತ್ರದ ಪ್ರಕ್ರಿಯೆ ಬಾಕಿಯಿದೆ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಇವರ ನೇತೃತ್ವದಲ್ಲಿ ಇಂದು ಉಡುಪಿಯ ಶಾಸಕರಾದ ರಘುಪತಿ ಭಟ್ ಅವರು ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಯವರನ್ನು ಉಡುಪಿ ಕ್ಷೇತ್ರದ ವಿವಿಧ ಅಭಿವೃದ್ಧಿ ಕೆಲಸ ಕಾರ್ಯಗಳಿಗಾಗಿ ಭೇಟಿಯಾದರು. ಈ ವೇಳೆ ಸಿಎಂ ಈ ಆದೇಶ ನೀಡಿದ್ದಾರೆ.
ಅಷ್ಟೆ ಅಲ್ಲದೆ, ಕೃಷಿ ಕಾಲೇಜು ಪ್ರಾರಂಭಿಸಲು ಈ ವರ್ಷದ ಬಜೆಟ್ ನಲ್ಲಿ ಆದೇಶಿಸಿ 5 ಕೋಟಿ ಬಿಡುಗಡೆ ಮಾಡಲು ಆದೇಶಿಸಿ, ಆರ್ಥೀಕ ಇಲಾಖೆಯ ಮುಖ್ಯ ಕಾರ್ಯದಶೀಗಳಿಗೆ ಲಿಖಿತ ಸೂಚನೆ ನೀಡಿದ್ದಾರೆ.
ವಿವಿಧ ಅಭಿವೃದ್ಧಿ ಕೆಲಸಗಳಿಗಾಗಿ ಮುಖ್ಯಮಂತ್ರಿಯವರನ್ನು ಭೇಟಿಯಾದ ಶಾಸಕರ ನಿಯೋಗದಲ್ಲಿ ಬ್ರಹ್ಮಾವರ ಪುರಸಭೆ ರಚನೆಯ ನಿಯೋಗ, ಮೀನುಗಾರರ ಸಂಘದ ನಿಯೋಗ, ಜೊತೆಗೆ ಇನ್ನು ಹಲವಾರು ಉಡುಪಿ ಕ್ಷೇತ್ರದ ಅಭಿವೃದ್ಧಿ ಕೆಲಸಕಾರ್ಯಗಳಿಗಾಗಿ ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಯಿತು, ಮುಖ್ಯಮಂತ್ರಿಗಳು ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು.