ಕಾಸರಗೋಡು, ಜ 12 (DaijiworldNews/SM): ಬಸ್ಸಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ನಿಷೇಧಿತ ಗಾಂಜಾವನ್ನು ಅಬಕಾರಿ ದಳದ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಮಂಜೇಶ್ವರದಲ್ಲಿ ನಡೆದಿದೆ. ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ಸಿನ ಮುಂಭಾಗದ ಬಸ್ ಸೀಟಿನಡಿಯಲ್ಲಿ ಬಚ್ಚಿಟ್ಟು ಗಾಂಜಾವನ್ನು ಸಾಗಾಟ ಮಾಡಲಾಗುತ್ತಿತ್ತು. ಎರಡೋ ಕಿಲೋದಂತೆ ೧೧ಪ್ಯಾಕೆಟ್ ಬಲ್ಲಿ ಒಟ್ಟು ಸುಮಾರು ೨೨ಕೆ.ಜಿ ಗಾಂಜಾವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಮಂಜೇಶ್ವರ ಚೆಕ್ ಪೋಸ್ಟ್ ಸಮೀಪ ಬಸ್ಸನ್ನು ತಡೆದು ತಪಾಸಣೆ ನಡೆಸಿದಾಗ ಓರ್ವ ವ್ಯಕ್ತಿಯು ಹಿಂಬಾಗಿಲಿನ ಮೂಲಕ ಇಳಿದು ಪರಾರಿಯಾಗಿದ್ದಾನೆ. ಆತನನ್ನು ಅಧಿಕಾರಿಗಳು ಬೆನ್ನಟ್ಟಿದರೂ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ. ಗಾಂಜಾ ಹೊಂದಿದ್ದ ಬ್ಯಾಗ್ ನಲ್ಲಿ ಚೆಂಗಳದ ನಿವಾಸಿಯೊಬ್ಬನ ಆಧಾರ್ ಕಾರ್ಡ್ ದೊರೆತಿದ್ದು, ಆತನೇ ಗಾಂಜಾ ಸಾಗಾಟ ಮಾಡಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ, ಅಬಕಾರಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.