ಕೊಣಾಜೆ, ಫೆ 12 (DaijiworldNews/SM): ಇಲ್ಲಿನ ಮಲಾರ್ ಉಗ್ಗನಬೈಲ್ ಬಳಿ ಮದ್ರಸಕ್ಕೆ ತೆರಳುತ್ತಿದ್ದ ಮೂವರು ವಿದ್ಯಾರ್ಥಿನಿಯರನ್ನು ಅಪಹರಿಸಿ ಅತ್ಯಾಚಾರ ಮತ್ತು ಕೊಲೆಗೆ ಯತ್ನಿಸಿದ ಆರೋಪದ ಮೇರೆಗೆ ಮೂವರನ್ನು ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಕೋದಂಡರಾಮ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ. ಬಂಧಿತರು ಅಮಾಯಕರು ಎಂದು ವಿಶ್ವ ಹಿಂದೂ ಪರಿಷತ್ ವಿರೋಧಿಸಿದ್ದು, ಅವರ ಬಂಧನಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ, ಪಾವೂರು ಉಗ್ಗನಬೈಲು ಸಮೀಪದ ಗುಣಪಾಲ(25), ಕಿರಣ್ ಕುಮಾರ್(26), ನೀರುಮಾರ್ಗದ ಸುಭಾಷ್(29) ಎಂಬವರನ್ನು ಬಂಧಿಸಲಾಗಿದೆ.
ಆದರೆ ಅಮಾಯಕರ ಮೇಲೆ ಕೇಸು ದಾಖಲಿಸಿ ಬಂಧಿಸಿದ್ದಾರೆ ಎಂದು ಇದೀಗ ಉಳ್ಳಾಲ ವಿಶ್ವ ಹಿಂದೂ ಪರಿಷತ್ ಆರೋಪಿಸಿದೆ. ಈ ಘಟನೆ ಫೆಬ್ರವರಿ ೧೦ರಂದು ಸಂಜೆ 5.25 ಸಂದರ್ಭದಲ್ಲಿ ನಡೆದಿದೆಯೆಂದು ದೂರು ದಾಖಲಾಗಿದೆ. ಆ ಸಮಯದಲ್ಲಿ ಆ ಯುವಕರು ಬೇರೆ ಪ್ರದೇಶದಲ್ಲಿ ಇದ್ದ ವಿಡಿಯೋ ದಾಖಲೆ ನಮ್ಮ ಬಳಿ ಇದ್ದು ಇದು ಯಾವುದನ್ನೂ ಸರಿಯಾಗಿ ಪರೀಕ್ಷಿಸದೆ ವಿಚಾರಣೆ ನಡೆಸದೆ ಏಕಾಏಕಿ ಮಧ್ಯರಾತ್ರಿ ಯಾರದ್ದೊ ಒತ್ತಡಕ್ಕೆ ಬಂಧಿಸಿ ಸುಳ್ಳು ಕೇಸು ದಾಖಲಿಸಿದ್ದಾರೆ ಎಂದು ವಿಹೆಚ್ ಪಿ ಆರೋಪಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಿರಪರಾಧಿಗಳನ್ನು ಬಿಡುಗಡೆಗೊಳಿಸಬೇಕು ಮತ್ತು ನೈಜ ಆರೋಪಿಗಳನ್ನು ಬಂಧಿಸಬೇಕೆಂಬ ಆಗ್ರಹವನ್ನು ಅವರು ಮುಂದಿಟ್ಟಿದ್ದಾರೆ.