ವರದಿ : ಹರಿಪ್ರಸಾದ್ ನಂದಳಿಕೆ
ಬೆಳ್ಮಣ್ ಫೆ 07: ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳ ತಂಡ ಹೊಸ ಮಾದರಿಯ ವಿದ್ಯುತ್ ಟರ್ಬೈನ್ಗಳಿಂದ ವಿದ್ಯುತ್ ಉತ್ಪಾದಿಸಿ ಸಾಧನೆ ಮೆರೆದಿದ್ದಾರೆ.ಕಾರ್ಕಳ ತಾಲೂಕಿನ ಬೋಳ ಗ್ರಾಮದಲ್ಲಿನ ಕಿಂಡಿ ಅಣೆಕಟ್ಟಿನ ನೀರನ್ನು ಉಪಯೋಗಿಸಿಕೊಂಡು ಟರ್ಬೈನ್ಗಳ ಸಹಾಯದಿಂದ ಹೊಸ ಮಾದರಿಯಲ್ಲಿ ವಿದ್ಯುತ್ ಉತ್ಪಾದಿಸಿ ಯಶಸ್ಸು ಕಂಡಿದ್ದಾರೆ.
ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಅಂತಿಮ ವರ್ಷದ ಸುಮಾರು 20 ವಿದ್ಯಾರ್ಥಿಗಳ ತಂಡ ಪ್ರೋಫೆಸರ್ ಸುನೀಲ್ ಬಿ.ಲಕ್ಕುಂಡಿಯವರ ಮಾರ್ಗದರ್ಶನದಲ್ಲಿ ಒಟ್ಟು ಮೂರು ವಿಧಧ ಟರ್ಬೈನ್ ಗಳನ್ನು ಸಿದ್ದಪಡಿಸಿದ್ದು ಈ ಟರ್ಬೈನ್ ಗಳು ಅತ್ಯಂತ ಕಡಿಮೆ ಎತ್ತರದಿಂದ ಬರುವ ನೀರಿನಿಂದ ವಿದ್ಯುತ್ ಉತ್ಪಾದನೆಯನ್ನು ಮಾಡುತ್ತದೆ. ಸುಮಾರು 2 ಮೀ. ಅಂತರದಿಂದ ಹರಿಯುವ ನೀರಿನಲ್ಲಿ 1.5 ಕಿ.ವ್ಯಾ. ವಿದ್ಯುತ್ ಉತ್ಪಾದಿಸಬಹುದಾಗಿದೆ ಎಂದು ವಿದ್ಯಾರ್ಥಿಗಳ ತಂಡದ ಮಾತು.
ಉಪಯೋಗ : ಟರ್ಬೈನ್ ಗಳ ಸಹಾಯದಿಂದ 2 ಮೀ ಎತ್ತರದಲ್ಲಿ ಹರಿಯುವ ನೀರಿನಲ್ಲಿ ಉತ್ಪಾದಿಸಿದ ವಿದ್ಯುತ್ತನ್ನು ಒಂದು ಮನೆಗೆ ಪೂರ್ಣ ರೀತಿಯಲ್ಲಿ ಬಳಕೆ ಮಾಡಬಹುದಾಗಿದೆ. ಅಲ್ಲದೆ ಸೂಕ್ತ ಮಾದರಿಯ ಪಂಪ್ಗಳನ್ನು ಟರ್ಬೈನ್ ಗೆ ಜೋಡಿಸಿ ಕೃಷಿ ಭೂಮಿಗಳಿಗೆ 24 ಗಂಟೆ ನೀರನ್ನು ಹಾಯಿಸಬಹುದಾಗಿದೆ. ಮಳೆಗಾಲದ ಸಂದರ್ಭ 6 ತಿಂಗಳ ಕಾಲದಲ್ಲಿ ಟರ್ಬೈನ್ ಗಳನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸಬಹುದಾಗಿದೆ. ಅಲ್ಲದೆ ಬ್ಯಾಟರಿಯನ್ನು ಚಾರ್ಚ್ ಮಾಡಿಕೊಳ್ಳಬಹುದಾಗಿದೆ.
ಎಲ್ಲೆಲ್ಲಿ ಅಳವಡಿಸಬಹುದು : ವಿದ್ಯಾರ್ಥಿಗಳಿಂದಲೇ ನಿರ್ಮಿತವಾದ ಈ ಟರ್ಬೈನ್ ಗಳನ್ನು ಅತ್ಯಂತ ಕಡಿಮೆ ಎತ್ತರದಲ್ಲಿ ಜೋಡಿಸಬಹುದಾಗಿದೆ. ಸಾಧಾರಣ ನೀರಿನ ರಭಸಕ್ಕೆ ಟರ್ಬೈನ್ ಗಳು ತಿರುಗುವುದರಿಂದ ಉತ್ಪತ್ತಿಯಾಗುವ ಶಕ್ತಿಯಿಂದ ವಿದ್ಯುತ್ ಉತ್ಪತ್ತಿಯಾಗುತ್ತದೆ. ಸಣ್ಣ ಪ್ರಮಾಣದ ನದಿಗಳಿಗೆ, ತೊರೆಗಳಲ್ಲಿ ಹಾಗೂ ಗುಡ್ದ ಪ್ರದೇಶದಲ್ಲಿ ಅಳವಡಿಸುವುದರಿಂದ ವಿದ್ಯುತ್ ಉತ್ಪಾದಿಸಬಹುದಾಗಿದೆ.
ಪ್ರತಿಯೊಂದು ಟರ್ಬೈನ್ ಗಳನ್ನು ತಯಾರಿಸಲು ಸುಮಾರು 50ರಿಂದ 60 ಸಾವಿರ ರೂಪಾಯಿಯ ವೆಚ್ಚ ತಗುಲಿದ್ದು ಸೆಲ್ಕೋ ಇಂಡಿಯಾ ಸೋಲಾರ್ ಕಂಪನಿಯೂ ಸಹಕಾರವನ್ನು ನೀಡಿದೆ. ಪ್ರತಿಯೊಂದು ಟರ್ಬೈನ್ ಗಳನ್ನು ವಿದ್ಯಾರ್ಥಿಗಳೇ ಸ್ವತಹ ಕಾಲೇಜು ಲ್ಯಾಬ್ನಲ್ಲಿ ತಯಾರಿಸಿದ್ದು ಅತ್ಯಂತ ಹೆಚ್ಚಿನ ದಕ್ಷತೆಯನ್ನು ಹೊಂದಿದೆ.
ಬೇಸಿಗೆ ಕಾಲದಲ್ಲಿ ನದಿ ನೀರಿನ ಒರತೆ ಕಡಿಮೆ ಇರುವ ಕಾರಣ ಅಣೆಕಟ್ಟಿನಲ್ಲಿ ಶೇಖರಣೆಯಾದ ನೀರು ಬಳಕೆ ಮಾಡಿಕೊಂಡು ವಿದ್ಯುತ್ ಉತ್ಪಾದನೆಗೆ ಮುಂದಾಗಿದ್ದು ಸರಿಯಾದ ಪ್ರದೇಶಕ್ಕಾಗಿ ಪುತ್ತೂರಿನ ವಿದ್ಯಾರ್ಥಿಗಳು ಕಾರ್ಕಳ ತಾಲೂಕಿನ ಗ್ರಾಮೀಣ ಭಾಗವಾದ ಬೋಳ ಗ್ರಾಮದ ಅಣೆಕಟ್ಟಿನ ನೀರಿನಲ್ಲಿ ವಿದ್ಯುತ್ ಉತ್ಪಾದಿಸಿ ಯಶಸ್ಸು ಕಂಡಿದ್ದಾರೆ. ಈ ಪ್ರಾಯೋಗಿಕ ವಿದ್ಯುತ್ ಉತ್ಪಾದನೆಗೆ ಬೋಳ ಗ್ರಾಮ ಪಂಚಾಯತಿ ಅಧ್ಯಕ್ಷ ದಿನೇಶ್ ಶೆಟ್ಟಿ ಹಾಗೂ ಉಪಾಧ್ಯಕ್ಷ ದಿನೇಶ್ ಸಹಕಾರ ನೀಡಿದ್ದಾರೆ.
ಅತ್ಯಂತ ಕಡಿಮೆ ಎತ್ತರದಿಂದ ಹರಿಯುವ ನೀರನ್ನು ಬಳಕೆ ಮಾಡಿಕೊಂಡು ವಿದ್ಯುತ್ ಉತ್ಪಾದನೆಗೆ ಮುಂದಾಗಿದ್ದೇವೆ. 20 ವಿದ್ಯಾರ್ಥಿಗಳ ತಂಡ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದು ಯಶಸ್ಸು ಕಂಡಿದ್ದೇವೆ.
- ಸುನೀಲ್ ಬಿ. ಲಕ್ಕುಂಡಿ. ಕಾಲೇಜು ಪ್ರೊಫೆಸರ್
ನಾವು ಮೂರು ವಿಧದ ಟರ್ಬೈನ್ ಗಳನ್ನು ಸಿದ್ದಪಡಿಸಿದ್ದು 2.ಮೀ ಅಂತರದಿಂದ ಹರಿಯುವ ನೀರಿನಲ್ಲಿ ಸುಮಾರು 1.5 ಕಿ.ವ್ಯಾಅ ಉತ್ಪಾದಿಸಿದ್ದೇವೆ. ಈ ವಿದ್ಯುತ್ತನ್ನು ಮನೆಯ ಬಳಕೆಗೆ ಹಾಗೂ ಕೃಷಿ ಭೂಮಿಯ ಪಂಪ್ ಸೆಟ್ ಗಾಗಿ ಬಳಸಿಕೊಳ್ಳಬಹುದಾಗಿದೆ.
- ಅಮಿತ್, ಮೆಕ್ಯಾನಿಕಲ್ ವಿಧ್ಯಾರ್ಥಿ