ಕುಂದಾಪುರ, ಫೆ.13 (DaijiworldNews/PY): ಹಿಲಿಯಾಣ ಗ್ರಾಮದ ಹೈಕಾಡಿ ಬಳಿ ಅಳಿವಿನಂಚಿನಲ್ಲಿರುವ ಅಪರೂಪದ ಪುನುಗು ಬೆಕ್ಕನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸ್ ಅರಣ್ಯ ಸಂಚಾರ ದಳ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದೆ. ಬಂಧಿತರಿಂದ ಜೀವಂತ ಬೆಕ್ಕು ಸಹಿತ ಇತರ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ತಂಡದ ಕೆಲವರು ಪರಾರಿಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಕುಂದಾಪುರ ವೆಸ್ಟ್ ಬ್ಲಾಕ್ ರಸ್ತೆಯ ದತ್ತಾತ್ರೇಯ ನಗರದ ನಿವಾಸಿ ಅಸ್ಗರ್ ಅಲಿ(22) ಹಾಗೂ ಬಿದ್ಕಲ್ ಕಟ್ಟೆ ನಿವಾಸಿ ಶರತ್(23) ಬಂಧಿತರು. ಬಂಧಿತರಿಂದ ಜೀವಂತ ಪುನುಗು ಬೆಕ್ಕು, ಪಂಜರ, ಮಾರುತಿ ಇಕೋ ಕಾರು ಹಾಗೂ ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆಯಲಾಗಿದೆ.
ದ.ಕ ಜಿಲ್ಲೆಯ ಪುತ್ತೂರು ಪೊಲೀಸ್ ಅರಣ್ಯ ಸಂಚಾರ ದಳದ ಪು ನಿರೀಕ್ಷಕ ಜಯ ಕೆ. ಅವರು ಸಿಬ್ಬಂದಿ ವರ್ಗದ ಸುಂದರ್ ಶೆಟ್ಟಿ, ಉದಯ, ರಾಮಕೃಷ್ಣ, ಮೊದಲಾದವರೊಂದಿಗೆ ಈ ಕಾರ್ಯಾಚರಣೆ ನಡೆಸಿದ್ದಾರೆ.
ಆರೋಪಿಗಳ ವಿರುದ್ದ ವನ್ಯ ಜೀವಿ ಅರಣ್ಯ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಅವರನ್ನು ಕುಂದಾಪುರದ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗಳನ್ನು ಹಾಗೂ ಸೊತ್ತುಗಳನ್ನು ಶಂಕರನಾರಾಯಣ ವಲಯ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸುವಂತೆ ಸೂಚಿಸಿದೆ ಎಂದು ಶಂಕರನಾರಾಯಣ ವಲಯಾರಣ್ಯಾಧಿಕಾರಿ ಚಿದಾನಂದ ಅವರು ತಿಳಿಸಿದ್ದಾರೆ.