ಮಂಗಳೂರು, ಫೆ 13 (Daijiworld News/MB) : ಕಾಸರಗೋಡಿನ ಯುವತಿಯನ್ನು ವಿವಾಹವಾಗುವುದಾಗಿ ನಂಬಿಸಿ ಮೈಸೂರಿಗೆ ಕರೆದೊಯ್ದು ಅತ್ಯಾಚಾರ ಮಾಡಿ ಬಳಿಕ ಸೈನೆಡ್ ನೀಡಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಣಿ ಸ್ತ್ರೀ ಹಂತಕ ಸೈನೆಡ್ ಮೋಹನ್ನ ಆರೋಪವು ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಈ ಪ್ರಕರಣದ ಶಿಕ್ಷೆಯ ಪ್ರಮಾಣ ಫೆ.15ರಂದು ಪ್ರಕಟವಾಗಲಿದೆ.
ಸೈನೆಡ್ ಮೋಹನ್ನ 19ನೇ ಪ್ರಕರಣ ಇದಾಗಿದ್ದು ನ್ಯಾಯಲಯವು ಈ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 48 ಸಾಕ್ಷಿಗಳು ಹಾಗೂ 70 ದಾಖಲೆಗಳನ್ನು ಪರಿಗಣಿಸಿದೆ.
ಆರೋಪಿಯ ವಿರುದ್ಧ ಪೊಲೀಸರು ಕೊಲೆ, ಅಪಹರಣ, ಅತ್ಯಾಚಾರ, ವಿಷ ಪದಾರ್ಥ ಉಣಿಸಿದ ಆರೋಪ, ಚಿನ್ನಾಭರಣ ಸುಳಿಗೆ, ವಿಷ ಉಣಿಸಿ ಸುಳಿಗೆ ಮಾಡಿದ ಆರೋಪ, ವಿವಾಹವಾಗುವುದಾಗಿ ನಂಬಿಸಿ ವಂಚನೆ, ಸಾಕ್ಷ್ಯ ನಾಶ ಆರೋಪ ದಾಖಲಿಸಿದ್ದು ಅವೆಲ್ಲವೂ ಸಾಬೀತಾಗಿದೆ ಎಂದು ನ್ಯಾಯಾಧೀಶರಾದ ಸಯೀದುನ್ನಿಸಾ ತೀರ್ಪು ನೀಡಿದ್ದಾರೆ.
2006 ರಲ್ಲಿ ಕಾಸರಗೋಡಿನ 23 ವರ್ಷದ ಬೀಡಿ ಕಟ್ಟುತ್ತಿದ್ದ ಯುವತಿ ತನ್ನ ಸಂಬಂಧಿಕರ ವಿವಾಹಕ್ಕೆ ಹೋಗಿದ್ದಾಗ ಅಲ್ಲಿ ಮೋಹನನ ಪರಿಚಯವಾಗಿದ್ದು ಆತ ತಾನು ಶಿಕ್ಷಕ ಹಾಗೂ ಆಕೆಯ ಜಾತಿಗೆ ಸೇರಿದವನು ಎಂದು ಪರಿಚಯಿಸಿಕೊಂಡಿದ್ದಾನೆ. ಹಾಗೆಯೇ ಆ ಬಳಿಕ ವಿವಾಹದ ಬಗ್ಗೆ ಮಾತುಕತೆ ನಡೆಸಿ ವಿವಾಹವಾಗುವುದಾಗಿ ತಿಳಿಸಿ ಒಂದು ವಾರದೊಳಗೆ ನಿರ್ಧಾರ ತಿಳಿಸುವುದಾಗಿ ಹೇಳಿದ್ದನು.
ಆ ಬಳಿಕ 2006 ಜೂನ್ 3 ರಂದು ಯುವತಿ ತಾನು ದೇವಸ್ಥಾನಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೊರಟ್ಟಿದ್ದಳು. ಮೋಹನ ಆಕೆಯನ್ನು ಮೈಸೂರಿನ ಲಾಡ್ಜ್ ಒಂದಕ್ಕೆ ಕರೆದೊಯ್ದು ಅಲ್ಲಿ ಒಂದು ರಾತ್ರಿ ಉಳಿದು ಬಳಿಕ ಮರುದಿನ ದೇವಸ್ಥಾನಕ್ಕೆ ಪೂಜೆಗೆಂದು ಕರೆದೊಯ್ದು ಬಸ್ ನಿಲ್ದಾಣದ ಬಳಿ ಸೈನೆಡ್ ನೀಡಿದ್ದ.
ಆಕೆ ಶೌಚಾಲಯಕ್ಕೆ ತೆರಳಿದ ವೇಳೆ ಅಲ್ಲೇ ಕುಸಿದು ಬಿದಿದ್ದಳು. ಮಾಹಿತಿ ತಿಳಿದ ಪೊಲೀಸ್ ಠಾಣೆಯ ಸಿಬ್ಬಂದಿ ಬಸವರಾಜು ಯುವತಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ವೈದ್ಯರು ಯುವತಿ ಮೃತಪಟ್ಟಿರುವುದಾಗಿ ಖಚಿತ ಪಡಿಸಿದ್ದರು.
ಇತ್ತ ಮನೆಯವರು ಯುವತಿ ನಾಪತ್ತೆಯಾದ ಕುರಿತಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು 2009 ರಲ್ಲಿ ಮೋಹನ್ ಬಂಧನವಾದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂದಿಸಿ ಈ ಹಿಂದೆ ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಒ. ಎಂ. ಕ್ರಾಸ್ತಾ ಹಾಗೂ ಪ್ರಸ್ತುತ ಜಯರಾಮ ಶೆಟ್ಟಿ ವಾದಿಸಿದ್ದರು.
ಇದು ಸೈನೆಡ್ ಮೋಹನ್ನ 19 ನೇ ಪ್ರಕರಣವಾಗಿದ್ದು ಇನ್ನೂ ಒಂದು ಪ್ರಕರಣ ಬಾಕಿ ಉಳಿದಿದೆ.