ಉಡುಪಿ, ಫೆ 13 (Daijiworld News/MB) : ನವಿಮುಂಬೈಯ ಮಾಯಾ ಬಾರ್ ಮಾಲಕ ವಶಿಷ್ಠ ಸತ್ಯನಾರಾಯಣ ಯಾದವ್ (45) ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಂಗಳವಾರ ನಾಲ್ವರನ್ನು ಬಂಧಿಸಿದ್ದು ಆರೋಪಿಗಳ ಹೆಚ್ಚಿನ ವಿಚಾರಣೆಗಾಗಿ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಬುಧವಾರ ನ್ಯಾಯಾಲಯ ಆದೇಶಿಸಿದೆ.
ಈ ಪ್ರಕರಣದ ಆರೋಪಿಗಳಾದ ದೆಹಲಿಯ ಹುಸಮನ್ಪುರ ನಿವಾಸಿ ಸುಮಿತ್ ಮಿಶ್ರ (23), ಸುರತ್ಕಲ್ ಚೊಕ್ಕಬೆಟ್ಟುವಿನ ಅಬ್ದುಲ್ ಶುಕೂರ್ ಯಾನೆ ಅದ್ದು (35), ಮಂಗಳೂರು ತೆಂಕಮಿಜಾರು ಗ್ರಾಮದ ಕಂದಾಲ್ಬೆಟ್ಟುವಿನ ಅವಿನಾಶ್ ಕರ್ಕೇರ (25), ಕರಂಬಳ್ಳಿ ಜನತಾ ಕಾಲನಿಯ ಮುಹಮ್ಮದ್ ಶರೀಫ್(32)ನನ್ನು ಪ್ರಕರಣದ ತನಿಖಾಧಿಕಾರಿ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಉಡುಪಿ ಜಿಲ್ಲಾ ೨ ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದ ಎದುರು ಹಾಜರು ಮಾಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುವ ಸಲುವಾಗಿ ಪೊಲೀಸ್ ಕಸ್ಟಡಿಗೆ ನೀಡುವಂತೆ ಪೊಲೀಸರು ಕೇಳಿಕೊಂಡಿದ್ದು ನ್ಯಾಯಾಧೀಶರು ಆರೋಪಿಗಳನ್ನು ಫೆ. ೧೭ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ "ವಶಿಷ್ಠ ಅವರ ಬಾರ್ನಲ್ಲಿ ಪ್ರಕರಣದ ಪ್ರಮುಖ ಆರೋಪಿ ಸುಮಿತ್ ಮಿಶ್ರಾ ಉದ್ಯೋಗಿಯಾಗಿದ್ದು ಮೂರು ತಿಂಗಳ ಹಿಂದೆ ವಶಿಷ್ಠರೊಂದಿಗೆ ಜಗಳ ಮಾಡಿಕೊಂಡು ಕೆಲಸ ಬಿಟ್ಟಿದ್ದನು. ಇದೇ ಹಳೆ ದ್ವೇಷದಿಂದ ಇತರರೊಂದಿಗೆ ಸೇರಿ ಹತ್ಯೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ" ಎಂದು ಹೇಳಿದ್ದಾರೆ.
ವಶಿಷ್ಠ ಅವರು ವಿರುದ್ಧವಾಗಿ ಮುಂಬೈನಲ್ಲಿ ಹಲವು ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ದೊರೆತಿದ್ದು ಈ ಬಗ್ಗೆ ತನಿಖೆ ನಡೆಸಬೇಕಾಗಿದೆ. ವಶಿಷ್ಠನ ಹಿನ್ನಲೆ ಕುರಿತಾಗಿ ಮಾಹಿತಿ ಕಲೆ ಹಾಕಲಾಗುತ್ತಿದೆ.
ತಂಗಿಯ ಸೀಮಂತ ಕಾರ್ಯಕ್ರಮಕ್ಕಾಗಿ ಆರೋಪಿ ಅವಿನಾಶ್ ಕರ್ಕೇರ ಬಾಡಿಗೆಗೆ ಪಡೆದಿದ್ದ ಕಾರನ್ನೇ ಈ ಕೃತ್ತವೆಸಗಲು ಬಳಸಿದ್ದು ಆ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ವಶಿಷ್ಟ ಅವರು ಫೆ.4 ರಂದು ಮುಂಬೈನಿಂದ ಉಡುಪಿಗೆ ಬಂದು ಅಲ್ಲಿನ ಲಾಡ್ಜ್ ಒಂದರಲ್ಲಿ ಗೆಳೆಯರೊಂದಿಗೆ ತಂಗಿದ್ದರು. ಫೆ.9 ರಂದು ರಾತ್ರಿ ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಹಿಂಬದಿಯಲ್ಲಿ ಕುಳಿತ್ತಿದ್ದ ಮೂವರು ಆರೋಪಿಗಳು , ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದ ವಶಿಷ್ಠ ಸತ್ಯನಾರಾಯಣ ಯಾದವ್ ಅವರ ಕುತ್ತಿಗೆಯನ್ನು ಬಿಗಿದು ಹತ್ಯೆ ಮಾಡಿದ್ದಾರೆ ಎಂದು ತನಿಖೆಯ ವೇಳೆ ತಿಳಿದು ಬಂದಿದೆ. ಆ ಬಳಿಕ ಮೃತದೇಹವನ್ನು ಬೆಳ್ಳಂಪಳ್ಳಿಯ ದೊಡ್ಡಣಗುಡ್ಡೆ ಎಂಬಲ್ಲಿ ಎಸೆದು ಪರಾರಿಯಾಗಿದ್ದರು. ಫೆ.10 ರಂದು ಪೊದೆಯಲ್ಲಿ ಪತ್ತೆಯಾಗಿತ್ತು.