ಉಡುಪಿ, ಫೆ 13 (Daijiworld News/MB) : ಮಹಾರಾಷ್ಟ್ರ ಪೊಲೀಸರು ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕೆ ನಡೆಸಲು ತೆರಳಿದ್ದ ಬೋಟನ್ನು ವಶಕ್ಕೆ ಪಡೆದುಕೊಂಡಿದ್ದು, ಆ ಬೋಟಿನಲ್ಲಿದ್ದ 7 ಮಂದಿ ಮೀನುಗಾರರನ್ನು ಬಂಧನ ಮಾಡಿರುವುದಾಗಿ ವರದಿ ತಿಳಿಸಿದೆ.
ಮಲ್ಪೆ ಬಂದರಿನಿಂದ ಕುಂದಾಪುರದ ವ್ಯಕ್ತಿಗೆ ಸೇರಿದ ಶ್ರೀ ಲಕ್ಷ್ಮೀ ಹೆಸರಿನ ಆಳ ಸಮುದ್ರ ಮೀನುಗಾರಿಕಾ ಬೋಟಿನಲ್ಲಿ ಕ್ಯಾಪ್ಟನ್ ರಾಮ ಭಟ್ಕಳ ಸೇರಿ 7 ಮಂದಿ ಮೀನುಗಾರರು ಎರಡು ದಿನಗಳ ಹಿಂದೆ ಮೀನುಗಾರಿಕೆಗೆ ತೆರಳಿದ್ದರು.
ಫೆ.11 ರಂದು ಮಧ್ಯರಾತ್ರಿಯಲ್ಲಿ ಈ ಬೋಟು ಗೋವಾ ರಾಜ್ಯ ದಾಟಿ ಮಹಾರಾಷ್ಟ್ರ ತಲುಪಿದ್ದು, ದೇವಗಡ ಸಮುದ್ರವನ್ನು ತಲುಪುತ್ತಿದ್ದಂತೆ ಅಲ್ಲಿನ ಕೊಸ್ಟ್ ಗಾರ್ಡ್ ಪೊಲೀಸರು ಈ ಬೋಟನ್ನು ವಶಕ್ಕೆ ಪಡೆದು ಈ 7 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ.
ಹಾಗೆಯೇ ಬೋಟ್ನಲ್ಲಿದ್ದ ಉಳಿದ ಮೀನುಗಾರರು ಉತ್ತರ ಕನ್ನಡ ಜಿಲ್ಲೆಯವರು ಎಂದು ತಿಳಿದು ಬಂದಿದೆ.
"ಬೋಟ್ ಮಹಾರಾಷ್ಟ್ರದ ಸಮುದ್ರ ತೀರದಲ್ಲಿ 12 ನಾಟಿಕಲ್ ದೂರದಲ್ಲಿದ್ದರೂ ಮಹಾರಾಷ್ಟ್ರದ ಕೋಸ್ಟ್ ಗಾರ್ಡ್ ಪೊಲೀಸರು, ಸ್ಥಳೀಯ ಮೀನುಗಾರರ ದೂರಿನ ಹಿನ್ನಲೆಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ" ಎಂದು ಮಲ್ಪೆಯ ಮೀನುಗಾರರು ಆರೋಪಿಸಿದ್ದಾರೆ.
"ನಿಯಮದ ಪ್ರಕಾರವಾಗಿ ಮೀನುಗಾರಿಕೆ ನಡೆಸುತ್ತಿದ್ದ ನಮ್ಮವರನ್ನು ಪೊಲೀಸರು ಅಕ್ರಮವಾಗಿ ಬಂಧನ ಮಾಡಿದ್ದು ಖಂಡನೀಯ. ಕೂಡಲೇ ಅವರನ್ನು ಬಂಧನ ಮಾಡಬೇಕು" ಎಂದು ಉಡುಪಿ ಟ್ರಾಲ್ ಬೋಟ್ ಚಾಲಕರ ಸಂಘದ ಅಧ್ಯಕ್ಷ ರವಿ ತಿಳಿಸಿದ್ದಾರೆ.