ಕಾಪು, ಫೆ.13 (DaijiworldNews/PY): ಬಂಟರ ಸಂಘದ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ವಸೂಲಿ ಮಾಡಿ ಮೋಸ ಮಾಡಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಾಲ್ವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗಳಿಗೆ 15 ದಿನಗಳ ನ್ಯಾಯಾಂಗಬಂಧನ ವಿಧಿಸಲಾಗಿದೆ.
ಫೆ.5 ಬುಧವಾರದಂದು ಸಂಜೆ ನಳಿನ್ ಕುಮಾರ್ ರೈ (56), ಗುರುದತ್ (48), ಮಾಲಿನಿ (49) ಹಾಗೂ ರೇಷ್ಮಾ (30) ಎಂಬವರು ಬಂಟರ ಮಾತೃ ಸಂಘದ ಹೆಸರು ಹೇಳಿಕೊಂಡು ಕೊಪ್ಪಲಂಗಡಿಯ ಗುಲಾಬಿ ಶೆಡ್ತಿ(70) ಎಂಬವರ ಮನೆಗೆ ಬಂದು, ಬಂಟರ ಮಿತ್ರ ಪತ್ರಿಕೆ ಬಗ್ಗೆ ಹಣ ನೀಡಬೇಕೆಂದು ಹೇಳಿದ್ದರು. ಅದರಂತೆ ಗುಲಾಬಿ ಶೆಡ್ತಿ 500 ರೂ ಹಾಗೂ ಮನೆಯ ಸಮೀಪದ ಪ್ರತಿಮಾ ಶೆಟ್ಟಿ 3000 ರೂ. ನೀಡಿದ್ದಾರೆ.
ಈ ವಿಚಾರವಾಗಿ ಬಂಟರ ಸಂಘದಲ್ಲಿ ವಿಚಾರಿಸಿದಾಗ ಸಂಘದ ವತಿಯಿಂದ ಯಾವುದೇ ಹಣ ವಸೂಲಿ ಮಾಡಿಲ್ಲ ಎಂದು ತಿಳಿಸಿದ್ದಾರೆ. ಹೀಗೆ ಆರೋಪಿಗಳು ಬಂಟರ ಸಂಘದ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ವಸೂಲಿ ಮಾಡಿ ಮೋಸಮಾಡಿರುವುದಾಗಿ ಗುಲಾಬಿ ಶೆಡ್ತಿ ದೂರಿನಲ್ಲಿ ತಿಳಿಸಿದ್ದಾರೆ.