ಸುಳ್ಯ, ಫೆ 7: ಸುಳ್ಯ ವಿಧಾನಸಭಾ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ದಯಾನಂದ ಕತ್ತಲ್ಸರ್ಗೆ ಸುಳ್ಯ ಘಟಕದಿಂದ ಕರೆ ಬಂದಿದೆ.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಜಾನಪದ ವಿಧ್ವಾಂಸ, ತುಳುವ ಬೊಳ್ಳಿ ದಯಾನಂದ ಕತ್ತಲ್ಸರ್ ಧಾರ್ಮಿಕ ಕೇಂದ್ರಗಳಲ್ಲಿ ತನ್ನ ವಾಕ್ ಚಾತುರ್ಯದ ಮೂಲಕ ಗುರುತಿಸಿಕೊಂಡಿದ್ದು, ಕರಾವಳಿಯಾದ್ಯಂತ ಚಿರಪರಿಚಿತರು. ಮಾತಿನಲ್ಲೇ ಮೋಡಿ ಮಾಡುವ ಇವರಿಗೆ ಕರಾವಳಿಯಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ.
ಇದೀಗ ಕಾಂಗ್ರೆಸ್ ಪಕ್ಷ ಸುಳ್ಯ ವಿಧಾನಸಭಾ ಕ್ಷೇತ್ರವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಉದ್ದೇಶದಿಂದ ದಯಾನಂದ ಕತ್ತಲ್ಸರ್ ಅವರನ್ನು ಕಣಕ್ಕಿಳಿಸಿ ಬಿಜೆಪಿಗೆ ತಿರುಗೇಟು ನೀಡಲು ನಿರ್ಧರಿಸಿದೆ. ಸುಳ್ಯ ಮೀಸಲು ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್ ಪಕ್ಷ 5 ಬಾರಿ ಸೋಲು ಕಂಡಿದ್ದು, ಈ ಬಾರಿ ದಯಾನಂದ ಕತ್ತಲ್ಸರ್ ಅವರನ್ನು ಕಣಕ್ಕಿಳಿಸಿ ಗೆಲ್ಲುವ ತಂತ್ರ ರೂಪಿಸಿದೆ.
ಈ ಬಗ್ಗೆ ದಾಯ್ಜಿವರ್ಲ್ಡ್ ವಾಹಿನಿ ಜೊತೆ ಪ್ರತಿಕ್ರಿಯಿಸಿದ ದಯಾನಂದ ಕತ್ತಲ್ಸರ್, ರಾಜಕೀಯ ಕ್ಷೇತ್ರದಲ್ಲಿ ನನಗೆ ಯಾವುದೇ ಒಲವು ಇಲ್ಲ. ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುವ ಆಸಕ್ತಿಯೂ ನನಗಿಲ್ಲ. ಆದರೆ ಅಲ್ಪಸಂಖ್ಯಾತ ಸಮುದಾಯದಲ್ಲಿ ಯಾವುದೇ ಬದಲಾವಣೆಗಳು ಆಗದಿರುವುದನ್ನು ನೋಡುವಾಗ ರಾಜಕೀಯಕ್ಕೆ ಪ್ರವೇಶಿಸಿ ಬದಲಾವಣೆಗಳನ್ನು ತರಬೇಕು ಎನ್ನುವ ಮನಸ್ಸಿದೆ. ಈ ಬಗ್ಗೆ ನನಗೆ ನಿರ್ಧಾರ ತೆಗೆದುಕೊಳ್ಳಲು ಸಮಯಾವಕಾಶ ಬೇಕು. ಸರಿಯಾಗಿ ಯೋಚಿಸಿ ನಂತರ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಮಿಶ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.