ಮಂಗಳೂರು, ಫೆ 13 (Daijiworld News/MB) : ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 2019ರ ಡಿ.19ರಂದು ನಡೆದ ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿನಿ ವಿಧಾನಸೌಧದ ಸಹಾಯಕ ಆಯುಕ್ತರ ಕಚೇರಿಯಲ್ಲಿ ಮ್ಯಾಜಿಸ್ಟೀರಿಯಲ್ ತನಿಖಾಧಿಕಾರಿ ಜಗದೀಶ್, ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಸಾಕ್ಷಿಗಳ ವಿಚಾರಣೆ ನಡೆಸಿದರು.
ಆ ಬಳಿಕ ತನಿಖಾಧಿಕಾರಿ ಜಗದೀಶ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, "ಇದುವರೆಗೆ ಒಟ್ಟು 203 ಮಂದಿ ಮ್ಯಾಜಿಸ್ಟೀರಿಯಲ್ ನ್ಯಾಯಾಲಯಕ್ಕೆ ಸಾಕ್ಷಿ ಹೇಳಿದ್ದಾರೆ. ಈ ಮೊದಲು 201 ಮಂದಿ ಸಾಕ್ಷಿ ಹಾಜರುಪಡಿಸಿದ್ದರು. ಗುರುವಾರ ಇಬ್ಬರು ಸಾಕ್ಷಿ ಹೇಳಿದ್ದಾರೆ. ಅಲ್ಲದೆ ಈ ಮೊದಲೇ ಸಾಕ್ಷಿ ನೀಡಿದ್ದ ವ್ಯಕ್ತಿಯೋರ್ವ ಮೊಬೈಲ್ ರೆಕಾರ್ಡಿಂಗ್ನ್ನು ಹಾಜರುಪಡಿಸಿದ್ದಾರೆ" ಎಂದರು.
ಮಂಗಳೂರು ಪೊಲೀಸ್ ಆಯುಕ್ತರಿಗೆ ಈ ಘಟನೆಗಳ ದೃಶ್ಯಾವಳಿಗಳನ್ನು ಹಾಜರು ಮಾಡುವಂತೆ ಸೂಚನೆ ನೀಡಲಾಗಿದೆ. 50 ತುಣುಕುಗಳು ಇದೆ ಎನ್ನಲಾದ ಪೆನ್ಡ್ರೈವ್ನ್ನು ಹಾಜರು ಪಡಿಸಲಾಗಿದೆ. ತನಿಖಾ ಉದ್ದೇಶದಿಂದಾಗಿ ಸುಮಾರು 20 ಡಿವಿಆರ್ಗಳನ್ನು ಪೊಲೀಸ್ ವಶಕ್ಕೆ ಪಡೆದು ನ್ಯಾಯಾಲಯದ ವಶಕ್ಕೆ ನೀಡಿದ್ದರು. ಅದರ ಸ್ವೀಕೃತಿಯನ್ನು ಎಸಿಪಿ ಹಾಗೂ ಪೊಲೀಸ್ ನೋಡಲ್ ಅಧಿಕಾರಿ ಬೆಳ್ಳಿಯಪ್ಪ ಹಾಜರುಪಡಿಸಿದ್ದಾರೆ.
ಗುರುವಾರ ಈ ಹಿಂದಿನ ವಿಚಾರಣೆಯ ವೇಳೆ ತಡವಾಗಿ ಬಂದಿದ್ದ ಇಬ್ಬರು ಸಾಕ್ಷಿಗಳನ್ನು ವಿಚಾರಣೆ ಮಾಡಲಾಗಿದ್ದು ಇಬ್ಬರೂ ಲಿಖಿತ ಸಾಕ್ಷಿ ನೀಡಿದ್ದಾರೆ. ಬಳಿಕ ಉಚ್ಛ ನ್ಯಾಯಾಲಯದ ಸೂಚನೆಯಂತೆ ವಿಡಿಯೋ ತುಣುಕು, ಸಿಸಿಟಿವಿ ಪೂಟೇಜ್ಗಳನ್ನು ಹಾಜರು ಮಾಡಲು ಪೊಲೀಸರು, ಮಾಧ್ಯಮ, ಪೊಲೀಸರನ್ನು ಆಹ್ವಾನ ಮಾಡಲಾಗಿತ್ತು. ಆದರೆ ಈವರೆಗೆ ಓರ್ವ ಮಾತ್ರ ಮೊಬೈಲ್ ರೆಕಾರ್ಡಿಂಗ್ ತುಣುಕನ್ನು ಹಾಜರು ಪಡಿಸಿದ್ದು ಉಳಿದಂತೆ ಯಾವುದೇ ಸಾರ್ವಜನಿಕರು ಸಾಕ್ಷಿ ನೀಡಲು ಬಂದಿಲ್ಲ ಎಂದು ತನಿಖಾಧಿಖಾರಿ ತಿಳಿಸಿದ್ದಾರೆ.
ಫೆ. 24 ರಂದು ಈ ಪ್ರಕರಣದ ವಿಚಾರಣೆಯು ಹೈಕೋರ್ಟ್ನಲ್ಲಿ ನಡೆಯಲಿದ್ದು ಇಲ್ಲಿಯವರೆಗಿನ ವರದಿಯನ್ನು ಸಲ್ಲಿಸಲು ನಿರ್ಧಾರ ಮಾಡಲಾಗಿದೆ. ಅಂಪೂಣ್ ವರದಿ ಸಲ್ಲಿಸಲು ಮೂರು ತಿಂಗಳುಗಳ ಕಾಲ ಅವಕಾಶವಿದೆ ಎಂದು ತಿಳಿಸಿದ್ದಾರೆ.
ಇಲ್ಲಿಯವರೆಗೆ ಪೊಲೀಸ್ ಇಲಾಖೆಯವರನ್ನು ವಿಚಾರಣೆ ಮಾಡಿಲ್ಲ. ಇನ್ನು ವಿಸ್ತಾರವಾದ ವಿಚಾರಣಾ ಪ್ರಕ್ರಿಯೆ ನಡೆಯುತ್ತಿದ್ದು ಎಲ್ಲಾ ತನಿಖೆ ಪೂರ್ಣವಾದ ಬಳಿಕವೇ ವರದಿ ಸಲ್ಲಿಕೆ ಮಾಡಲಾಗುವುದು ಎಂದು ತನಿಖಾಧಿಕಾರಿ ಜಗದೀಶ್ ಅವರು ಮಾಹಿತಿ ನೀಡಿದ್ದಾರೆ.
ಗುರುವಾರ ಇಬ್ಬರು ಮಂಗಳೂರು ಮಿನಿವಿಧಾನಸೌಧ ಸಹಾಯಕ ಆಯುಕ್ತರ ಕಚೇರಿಯಲ್ಲಿ ಸಾಕ್ಷಿ ನೀಡಿದ್ದು ಓರ್ವ ವಿಡಿಯೋ ತುಣುಕನ್ನು ನೀಡಿದ್ದಾರೆ. ಇಂದು ಕರ್ನಾಟಕ ಬಂದ್ ಇರುವ ಹಿನ್ನಲೆಯಲ್ಲಿ ಹಾಗೂ ಸಾರ್ವಜನಿಕರಿಗೆ ಅನಾನುಕೂಲ ಆಗದಿರಲೆಂದು ಫೆ.19 ಕ್ಕೆ ವಿಚಾರಣೆಯನ್ನು ಮುಂದೂಡಿಕೆ ಮಾಡಲಾಗಿದೆ. ಫೆ.19 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ವಿಚಾರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಹಾಗೆಯೇ ಆಸಕ್ತರಿಗೆ ಇನ್ನೊಂದು ಅವಕಾಶ ನೀಡಲಾಗುತ್ತಿದ್ದು ಸ್ವತಃ ಅವರೇ ಚಿತ್ರೀಕರಣ ಮಾಡಿರುವ ಅಥವಾ ಮನೆಯಲ್ಲಿರುವ ಸಿಸಿಟಿವಿಯ ಡಿವಿಆರ್ಗಳನ್ನು ಸ್ವೀಕಾರ ಮಾಡಲಾಗುವುದು. ಆದರೆ ಸಾಮಾಜಿಕ ಜಾಲತಾಣದಲ್ಲಿರುವ ವಿಡಿಯೋವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.