ಮಂಗಳೂರು, ಫೆ 13 (DaijiworldNews/SM): ದ.ಕ. ಜಿಲ್ಲೆಯ ಮತದಾರರ ಅಂತಿಮ ಪಟ್ಟಿ ಬಿಡುಗಡೆಗೊಳಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಂತಹ ಸುದ್ದಿಗೋಷ್ಠಿಯಲ್ಲಿ ಡಿಸಿ ಸಿಂಧೂ ಪಿ ರೂಪೇಶ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
"2020 ರ ಜನವರಿ 1ರಂದು ಪ್ರಕಟವಾದ ಮತದಾರರ ಪಟ್ಟಿಯ ಪ್ರಕಾರ ಜಿಲ್ಲೆಯಲ್ಲಿ 17,23,960 ಮತದಾರರಿದ್ದಾರೆ. ಅದರಲ್ಲಿ 8,44,955 ಪುರುಷರು, 8,78,933 ಮಹಿಳೆಯರು ಎಂಬುವುದಾಗಿ ತಿಳಿಸಿದ್ದಾರೆ. ಇನ್ನು ಜನವರಿ 6 ರಿಂದ 10 ರವರೆಗೆ ವಿವಿಧ ಕಾಲೇಜುಗಳು ಮತ್ತು ಮತದಾನ ಕೇಂದ್ರಗಳಲ್ಲಿ ದಾಖಲಾತಿ ಅಭಿಯಾನ ನಡೆದಿದ್ದು, ಇದರಲ್ಲಿ 9,992 ಫಾರ್ಮ್ 6ರ ಮೂಲಕ ಹೊಸ ಸೇರ್ಪಡೆ, ಫಾರ್ಮ್ 7ರಲ್ಲಿ 4,332 ಹೆಸರನ್ನು ಸೇರಿಸಲು ಆಕ್ಷೇಪಿಸುವ ಅರ್ಜಿ, ಫಾರ್ಮ್ 8ರಲ್ಲಿ 4,172 ಮತದಾರರ ಪಟ್ಟಿಯಲ್ಲಿ ನಮೂದಿಸಲಾದ ವಿವರಗಳಿಗೆ ತಿದ್ದುಪಡಿಗಾಗಿ ಅರ್ಜಿ ಮತ್ತು ನಮೂನೆ 8 ಎಯಲ್ಲಿ 232 ಮತದಾರರ ಪಟ್ಟಿಯ ಒಂದು ಭಾಗದಿಂದ ಚುನಾವಣೆಯ ಮತ್ತೊಂದು ಭಾಗಕ್ಕೆ ಪ್ರವೇಶವನ್ನು ವರ್ಗಾಯಿಸಲು ಅರ್ಜಿಗಳು ಸಲ್ಲಿಕೆಯಾಗಿದ್ದವು ಎಂದು ಅವರು ಮಾಹಿತಿ ನೀಡಿದ್ದಾರೆ.
ಇನ್ನು ಜನವರಿ 25 ರಂದು ಟೌನ್ಹಾಲ್ನಲ್ಲಿ ರಾಷ್ಟ್ರೀಯ ಮತದಾರರ ದಿನವನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಅಲ್ಲದೆ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳನ್ನು ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಭಾಗವಹಿಸಲು ಕೋರಲಾಗಿದೆ. ಜಿಲ್ಲೆಯಲ್ಲಿ ಒಟ್ಟು 1,861 ಮತಗಟ್ಟೆಗಳಿವೆ. ಒಟ್ಟು 28,479 ಯುವ ಮತದಾರರನ್ನು ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಮತದಾರ ಪಟ್ಟಿ ಸಂಬಂಧಿಸಿದಂತೆ ಯಾವುದೇ ರೀತಿಯ ವಿಚಾರಣೆಗೆ ಜನರು ಟೋಲ್ ಫ್ರೀ ಸಂಖ್ಯೆ 1950 ಗೆ ಸಂಪರ್ಕಿಸಬಹುದಾಗಿದೆ. ಅಲ್ಲದೆ ಹೆಚ್ಚಿನ ಮಾಹಿತಿಗಾಗಿ ಮತದಾರರು ceokarnataka.kar.nic.in ಮತ್ತು dk.nic.in ಗೆ ಲಾಗ್ ಇನ್ ಮಾಡಬಹುದು ಎಂದು ಜಿಲ್ಲಾಧಿಕಾರಿ ಸಿಂಧೂ ಪಿ ರೂಪೇಶ್ ಹೇಳಿದರು.
ಇನ್ನು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮತದಾರರ ಪಟ್ಟಿಯ ಪ್ರತಿಗಳನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಹಸ್ತಾಂತರಿಸಿದರು.