ಮಂಗಳೂರು, ಫೆ 13 (DaijiworldNews/SM): ವಿದೇಶದಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಪ್ರಯಾಣಿಕನೋರ್ವ ಅಕ್ರಮವಾಗಿ ಚಿನ್ನಸಾಗಾಟ ನಡೆಸುತ್ತಿರುವುದು ಕಂಡುಬಂದಿದ್ದು, ಚಿನ್ನ ಸಹಿತ ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕಾಸರಗೋಡು ಸಮೀಪದ ಮುಹಮ್ಮದ್ ಮುಹೀರ್ ಪಟ್ಲ (24) ಬಂಧಿತ ಆರೋಪಿಯಾಗಿದ್ದಾನೆ.
ಈತ ದುಬೈಯಿಂದ ಮಂಗಳೂರಿಗೆ ಆಗಮಿಸಿದ ಏರ್ಇಂಡಿಯಾ ವಿಮಾನದಲ್ಲಿ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಈ ಬಗ್ಗೆ ಪರೀಕ್ಷಿಸಿದ ವೇಳೆ ಆರೋಪಿ ಚಿನ್ನ ಸಾಗಾಟ ನಡೆಸುತ್ತಿರುವುದು ಕಂಡುಬಂದಿದ್ದು, ತಕ್ಷಣವೇ ಆತನನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಬುಧವಾರ ಸಂಜೆ ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದಾಗ ಮುಹೀರ್ ಬಳಿಯಿದ್ದ ಎಮೆರ್ಜೆನ್ಸಿ ಲೈಟ್ ಮತ್ತು ಸೋಲಾರ್ ವಾಲ್ಲೈಟ್ನೊಳಗೆ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಸುಮಾರು 9.39 ಲಕ್ಷ ರೂಪಾಯಿ ಮೌಲ್ಯದ 233.18 ಗ್ರಾಂ ತೂಕದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.