ಬಂಟ್ವಾಳ, ಫೆ 13 (DaijiworldNews/SM): ಕಳ್ಳತನ ಪ್ರಕರಣವೊಂದರಲ್ಲಿ ಪೊಲೀಸರ ತನಿಖೆ ಚುರುಗೊಳ್ಳುತ್ತಿದ್ದಂತೆ ವ್ಯಾಪಾರಿಯೇ ಬಂಗಾರವನ್ನು ಠಾಣೆಗೆ ತಂದೊಪ್ಪಿಸಿದ ಸ್ವಾರಸ್ಯಕರ ಘಟನೆಯೊಂದು ವಿಟ್ಲ ಠಾಣೆಯಲ್ಲಿ ನಡೆದಿದೆ. ಕಾನೂನಿನ ದುರ್ಬಳಕೆ ಮಾಡಲು ಯತ್ನಿಸಿದ ದೂರುದಾರರ ಮೇಲೆಯೇ ಪ್ರಕರಣ ದಾಖಲಿಸಿಕೊಂಡು ಓರ್ವ ಆರೋಪಿಯನ್ನು ವಿಟ್ಲ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕುಳ ಗ್ರಾಮದ ಕಾರ್ಯಾಡಿ ಕ್ವಾಟ್ರಸ್ ನಿವಾಸಿ ನಿಜಾಮುದ್ದೀನ್(26) ಬಂಧಿತ ಆರೋಪಿಯಾಗಿದ್ದಾನೆ. ಕಾಂತಡ್ಕ ನಿವಾಸಿ ಶಾಕಿರಾ ಹಾಗೂ ಜಲೀಲ್ ಎಂಬವರು ಆರೋಪಿಗಳೆಂದು ಬಂಗಾರ ವ್ಯಾಪಾರಿ ಕೊಳ್ನಾಡು ನಿವಾಸಿ ಮಹಮ್ಮದ್ ಶಮೀರ್ ನೀಡಿದ ದೂರಿನಲ್ಲಿ ಹೇಳಲಾಗಿದ್ದು, ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಳಿಕೆ ಗ್ರಾಮದ ಕಾಂತಡ್ಕ ನಿವಾಸಿ ಶಾಕಿರಾ(21) ಡಿ.30ರಂದು ಮನೆಗೆ ಬೀಗ ಹಾಕಿ ಪೇಟೆಗೆ ಹೋಗಿ ಹಿಂದಿರುಗುವ ಸಮಯ ಮನೆಯ ಹಿಂದಿನ ಬಾಗಿಲು ತೆರೆದಿದ್ದು, ಮನೆಯಲ್ಲಿದ್ದ ಸುಮಾರು 28 ಗ್ರಾಂ ಚಿನ್ನಾಭರಣ ಸೇರಿ 3ಸಾವಿರ ನಗದನ್ನು ಕಳವುಗೈಯ್ಯಲಾಗಿತ್ತೆಂದು ವಿಟ್ಲ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಬಂಗಾರದ ವ್ಯಾಪಾರಿಯೊಬ್ಬ ಠಾಣೆಗೆ ಬಂದು ಬಂಗಾರವನ್ನು ಹಿಂದಿರುಗಿಸಲು ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಶಾಕಿರಾಗೆ ಆರ್ಥಿಕ ಸಮಸ್ಯೆಯಾಗಿದ್ದು, ನಿಜಾಮುದ್ದೀನ್ ಹಾಗೂ ಜಲೀಲ್ ಜತೆಗೆ ಕಳ್ಳತನದ ದೂರುದಾರೆ ಶಾಕಿರಾ ಬಂದು ಬಂಗಾರವನ್ನು ಡಿ.20ರಂದೇ ತನಗೆ ಮಾರಾಟ ಮಾಡಿರುವುದಾಗಿ ಹೇಳಿಕೊಂಡಿದ್ದಾನೆನ್ನಲಾಗಿದೆ.
ಬಂಗಾರವನ್ನು ಮಾರಾಟ ಮಾಡಿ ಬಳಿಕ ಸುಳ್ಳು ದೂರು ನೀಡಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಮೂವರ ವಿರುದ್ದ ಪ್ರಕರಣ ದಾಖಲಾಗಿದ್ದು, ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.