ಮಂಗಳೂರು, ಫೆ 14 (Daijiworld News/MB) : ಅಡುಗೆ ಅನಿಲ ದರವನನ್ನು ಏಕಾಏಕಿ ಹೆಚ್ಚಳ ಮಾಡಿರುವುದು ಸರಿಯಲ್ಲ. ಕಾಂಗ್ರೆಸ್ ಸರಕಾರ ಇದ್ದಾಗ ಸ್ವಲ್ಪ ಹೆಚ್ಚಳ ಮಾಡಿದರೂ ವಿರೋಧ ಮಾಡುತ್ತಿದ್ದರು. ಈ ರೀತಿ ಏಕಾಏಕಿಯಾಗಿ ಅಡುಗೆ ಅನಿಲ ದರ ಏರಿಕೆ ಮಾಡಿರುವುದು ಸಾಮಾನ್ಯ ಜನರ ಮೇಲೆ ಬರೆ ಎಳೆದಂತೆ ಆಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಶುಕ್ರವಾರ ಅಡುಗೆ ಅನಿಲ ದರ ಹೆಚ್ಚಳ ವಿಚಾರವಾಗಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, "ಕರ್ನಾಟಕದಲ್ಲಿ ಬಿಜೆಪಿ ಬಂದ ಬಳಿಕ ರಾಜ್ಯದ ಸಮಸ್ಯೆಗೆ ಪರಿಹಾರ ದೊರೆಯುತ್ತಿಲ್ಲ. ಯಾವ ಜಿಲ್ಲೆಗೂ ಪ್ರಕೃತಿ ವಿಕೋಪದ ಹಣ ಬಿಡುಗಡೆಯಾಗಿಲ್ಲ. ಶಾಸಕರ ನಿಧಿಗೂ ಹಣ ಬಿಡುಗಡೆ ಆಗಿಲ್ಲ. ರಾಜ್ಯಕ್ಕೆ 2800 ಕೋಟಿ ಹಣ ಬಾಕಿಯಿದೆ, ಪಂಚಾಯತ್ ನಲ್ಲಿ ಆಗುತ್ತಿದ್ದ ಸ್ವಲ್ಪ ಕೆಲಸ ಕೂಡ ಆಗುತ್ತಿಲ್ಲ ಎಂದು ತಿಳಿಸಿದರು.
ಸರಕಾರ ಅಕ್ಕಿ ಕೊಡಲು ಕೂಡಾ ಯೋಚನೆ ಮಾಡುತ್ತಿದೆ. ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಘಿದ್ದ ಕಾಲದಲ್ಲಿ ಯಾವುದೇ ಹಣಕಾಸಿನ ಕೊರತೆಯಾಗಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಮಾತನಾಡುವರಿಗೆ ಅವರ ರಾಜಕೀಯ ಅನುಭವದಷ್ಟೇ ವಯಸ್ಸಾಗಿದೆ. ನಮ್ಮ ಜಿಲ್ಲೆಯ ಪರಿಶಿಷ್ಟ ಜಾತಿಯವರನ್ನು ಮಂತ್ರಿ ಮಾಡುವ ಯೋಗ್ಯತೆ ಅವರಿಗಿಲ್ಲ ಎಂದು ಅವರು ಆರೋಪ ಮಾಡಿದರು.