ಮೂಡುಬಿದಿರೆ, ಫೆ 14 (Daijiworld News/MB) : ಭಕ್ತರೆಂದರೆ ಭಗವಂತನಿಗೆ ಪ್ರಿಯರಾದವರು. ಅವರ ಹೃದಯದಲ್ಲಿ ಭಗವಂತ ವಿರಾಜಮಾನರಾಗಿರುತ್ತಾರೆ. ತಾಯಿಗೆ ತನ್ನ ಮಕ್ಕಳು ಬಳಿ ಬಂದಾಗ ಎಷ್ಟು ಆನಂದವಾಗುತ್ತದೆಯೋ ಅಷ್ಟೇ ಸಂತಸ ಭಕ್ತರು ಕ್ಷೇತ್ರಕ್ಕೆ ಬಂದಾಗ ಅಲ್ಲಿರುವ ಅವ್ಯಕ್ತ ಶಕ್ತಿ ಆನಂದ ಹೊಂದುತ್ತದೆ ಎಂದು ಬೈಲೂರು ರಾಮಕೃಷ್ಣ ಆಶ್ರಮದ ಶ್ರೀ ಸ್ವಾಮಿ ವಿನಾಯಕನಂದಾಜಿ ಮಹಾರಾಜರು ಆಶೀರ್ವಚನ ನೀಡಿದರು.
ಮೂಡುಬಿದಿರೆ ಕರಿಂಜೆಯ ಶ್ರೀ ಲಕ್ಷ್ಮೀಸತ್ಯನಾರಾಯಣ ವೀರಾಂಜನೇಯ ಸ್ವಾಮಿ ಸನ್ನಿಧಿಯಲ್ಲಿ ನಡೆಯುತ್ತಿರುವ ಅಷ್ಟಬಂಧ ಅಷ್ಟೋತ್ತರ ಸಹಸ್ರ ಬ್ರಹ್ಮಕಲಶೋತ್ಸವ, ಅಷ್ಟಪವಿತ್ರ ನಾಗಮಂಡಲದ ಗುರುವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಋಷಿ ಮುನಿಗಳು ಪಡೆದ ಅನುಭವ ಮನುಜರಿಗೆ ಮನುಷ್ಯತ್ವದ ಮಾರ್ಗವನ್ನು, ಸನ್ನಡತೆಯ ಹಾದಿಯನ್ನು ತೋರಿಸುತ್ತದೆ. ನಮ್ಮ ಪೂರ್ವಜರು ಹಾಕಿದ ಮಾರ್ಗದಲ್ಲಿ ನಾವು ನಡೆದರೆ ನಮಗೆ ಎಂದಿಗೂ ಕೆಡುಕಾಗದು. ಜಗತ್ತಿನಲ್ಲಿ ವ್ಯವಹಾರಿಕ ಜೀವನದಲ್ಲಿ ಭಗವಂತನಲ್ಲಿ ನೀವು ನಂಬಿಕೆ ಇಟ್ಟರೆ ಆ ಜ್ಯೋತಿ ನಿಮ್ಮನ್ನು ಕರೆದುಕೊಂಡು ಹೋಗುತ್ತದೆ ಎಂದರು.
ದಿವ್ಯ ಸಾನಿಧ್ಯವನ್ನು ವಹಿಸಿದ್ದ ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ ಮತ್ತು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಮಾತಾನಂದಮಯಿ ಅವರು ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಸಂಸದ ನಳಿನ್ಕುಮಾರ್ ಕಟೀಲು, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮೋಹನ್ ಆಳ್ವ, ಕಾರ್ಕಳ ಕ್ಷೇತ್ರ ಶಾಸಕ ಸುನಿಲ್ ಕುಮಾರ್, ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಪ್ರಕಾಶ್ ಬಿ ಎನ್, ಕಾರ್ಕಳ ತಾ. ಪಂ ಅಧ್ಯಕ್ಷೆ ಸೌಭಾಗ್ಯ ಮಡಿವಾಳ, ಸಿಎ ಬ್ಯಾಂಕಿನ ಅಧ್ಯಕ್ಷ ಸುಂದರ್ ಹೆಗ್ಡೆ, ದುರ್ಗಾಪರಮೇಶ್ವರಿ ಕ್ಷೇತ್ರ ನಾಳ ಇದರ ಮೊಕ್ತೇಸರ ವಸಂತ್ ಮಜಲು, ಸಮಿತಿ ಕಾರ್ಯಾಧ್ಯಕ್ಷ ಸುಧೀರ್ ಹೆಗ್ಡೆ, ನಿತ್ಯಾನಂದ ಹೆಗಡೆ, ಸಂತೋಷ್ ವಾಗ್ಲೆ, ಶ್ರೀಪತಿ ಭಟ್, ಸಂದೇಶ್ ಶೆಟ್ಟಿ, ವೆಂಕಟ್ರಮಣ ರಾವ್, ಬಾಹುಬಲಿ ಪ್ರಸಾದ್, ಸುದರ್ಶನ್ ಎಂ ಮೊದಲಾದವರು ಉಪಸ್ಥಿತರಿದ್ದರು.