ಕಡಬ, ಫೆ 14 (DaijiworldNews/SM): ಆರು ತಿಂಗಳ ಹಿಂದೆ ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರನ್ನು ಕಡಬ ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಕಾರು ಅರುಣ್ ಕುಮಾರ್ ಪುತ್ತಿಲ ಎಂಬವರಿಗೆ ಸೇರಿದ್ದಾಗಿದೆ ಎಂದು ಕಡಬ ಪೋಲೀಸರು ತಿಳಿಸಿದ್ದಾರೆ.
ಮಹಿಳೆಗೆ ಡಿಕ್ಕಿ ಹೊಡೆದು ಪರಾರಿಯಾದ ಕಾರಿನ ಬಗ್ಗೆ ಸಿಸಿ ಕ್ಯಾಮರಾ ದೃಶ್ಯಗಳನ್ನು ಆಧಾರಿಸಿ ಪತ್ತೆಹಚ್ಚಲಾಗಿದೆ. ಪೊಲೀಸರು ಕೊನೆಗೂ ಪ್ರಕರಣವನ್ನು ಬೇಧಿಸಿದ್ದಾರೆ. 2019ರ ಸೆಪ್ಟೆಂಬರ್ 9ರಂದು ಸುಬ್ರಹ್ಮಣ್ಯ-ಕಡಬ ರಾಜ್ಯ ಹೆದ್ದಾರಿಯ ನೆಟ್ಟಣ ಎಂಬಲ್ಲಿ ಮಹಿಳೆಗೆ ಡಿಕ್ಕಿ ಹೊಡೆದು ಕಾರು ಪರಾರಿಯಾಗಿತ್ತು.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಮಹಿಳೆ ಸುಮತಿ(48) ಎಂಬವರು ಬಳಿಕ ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದರು. ಇದೀಗ ಆರು ತಿಂಗಳುಗಳ ನಂತರ ವಾಹನವನ್ನು ಪೋಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.