ಉಡುಪಿ, ಫೆ 14 (DaijiworldNews/SM): ಇಲ್ಲಿನ ಮಾಯಾ ಬಾರ್ ಮಾಲಕ ವಶಿಷ್ಠ ಸತ್ಯನಾರಾಯಣ ಯಾದವ್(45) ಎಂಬವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿಯ ಸ್ನೇಹಿತನಾಗಿದ್ದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೈಫ್ ಅಕಾ ಸೈಫುದ್ದೀನ್ ಅವರನ್ನು ಅಥ್ರಾಡಿಯ ಪ್ರಮುಖ ಆರೋಪಿಯಾಗಿದ್ದು, ಆತನನ್ನು ಅಥ್ರಾಡಿಯ ಮನೆಯಿಂದ ಬಂಧಿಸಲಾಗಿದೆ ಎಂದು ಉಡುಪಿಯ ಎಸ್ಪಿ ಎನ್.ವಿಷ್ಣುವರ್ಧನ್ ತಿಳಿಸಿದ್ದಾರೆ.
ಸೈಫ್ ಎಕೆಎಂಎಸ್ ಟ್ರಾವೆಲ್ಸ್ ನ ಮಾಲೀಕನಾಗಿದ್ದ. ಸೈಫ್ ಈ ಕೊಲೆ ಪ್ರಕರಣದ ಸೂತ್ರಧಾರ ಎಂದು ತಿಳಿದುಬಂದಿದೆ. ಪ್ರಕರಣದಲ್ಲಿ ಸೈಫ್ ನ ಪಾತ್ರ ಕುರಿತಂತೆ ತನಿಖೆ ನಡೆಸಲಾಗುತ್ತಿದೆ. ಇದಕ್ಕೂ ಮುನ್ನ ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಎಕೆಎಂಎಸ್ ನ ಮೂವರು ಸೇರಿದಂತೆ ಒಟ್ಟು ನಾಲ್ವರನ್ನು ಈಗಾಗಲೇ ಬಂಧಿಸಲಾಗಿದೆ.
ಇನ್ನು ವಶಿಷ್ಟ ಅವರು ಫೆ.4 ರಂದು ಮುಂಬೈನಿಂದ ಉಡುಪಿಗೆ ಬಂದು ಅಲ್ಲಿನ ಲಾಡ್ಜ್ ಒಂದರಲ್ಲಿ ಗೆಳೆಯರೊಂದಿಗೆ ತಂಗಿದ್ದರು. ಫೆ.9 ರಂದು ರಾತ್ರಿ ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಹಿಂಬದಿಯಲ್ಲಿ ಕುಳಿತ್ತಿದ್ದ ಮೂವರು ಆರೋಪಿಗಳು, ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದ ವಶಿಷ್ಠ ಸತ್ಯನಾರಾಯಣ ಯಾದವ್ ಅವರ ಕುತ್ತಿಗೆಯನ್ನು ಬಿಗಿದು ಹತ್ಯೆ ಮಾಡಿದ್ದಾರೆ ಎಂದು ತನಿಖೆಯ ವೇಳೆ ತಿಳಿದು ಬಂದಿದೆ. ಆ ಬಳಿಕ ಮೃತದೇಹವನ್ನು ಬೆಳ್ಳಂಪಳ್ಳಿಯ ದೊಡ್ಡಣಗುಡ್ಡೆ ಎಂಬಲ್ಲಿ ಎಸೆದು ಪರಾರಿಯಾಗಿದ್ದರು. ಬಳಿಕ ಫೆ.10 ರಂದು ಪೊದೆಯಲ್ಲಿ ಮೃತದೇಹ ಪತ್ತೆಯಾಗಿತ್ತು.