ಮಂಗಳೂರು, ಫೆ 14 (DaijiworldNews/SM): ದೇಶದ ರಾಜಕಾರಣ ಹೀನಾಯ ಸ್ಥಿತಿ ತಲುಪಿದ್ದು, ಮೋದಿ ಆಧುನಿಕ ಭಸ್ಮಾಸುರರಾಗಿದ್ದಾರೆ ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್ ಮುಖಂಡ ವಿ ಎಸ್ ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಂತಹ ಸಂದರ್ಭದಲ್ಲಿ ಹತಾರು ಆಶ್ವಾಸನೆಗಳನ್ನು ನೀಡಿದ್ದರು. ಆದರೆ, ಇಲ್ಲಿಯ ತನಕ ಯಾವುದೇ ಆಶ್ವಾಸನೆಗಳನ್ನು ಈಡೇರಿಸಿಲ್ಲ. ಸುಳ್ಳೇ ಪ್ರಧಾನಿಯವರ ಬಂಡವಾಳ ಎಂದು ವಾಗ್ದಾಳಿ ನಡೆಸಿದ್ದಾರೆ.
ದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಮೋದಿ ಅಧಿಕಾರಕ್ಕೆ ಬಂದಾಗ 53.11 ಲಕ್ಷ ಕೋಟಿ ಸಾಲ ಇತ್ತು. 2019 ಸೆಪ್ಟೆಂಬರ್ ತಿಂಗಳಿನ ವರದಿಯ ಪ್ರಕಾರ 91.01ಲಕ್ಷ ಕೋಟಿ ಸಾಲವಾಗಿದೆ. ಹಸಿವಿನಿಂದ ಬಳಲುತ್ತಿರುವ ರಾಷ್ಟ್ರದ ಪಟ್ಟಿಯಲ್ಲಿ ಭಾರತ 103ನೇ ಸ್ಥಾನದಲ್ಲಿದೆ. ಒಂದೊಮ್ಮೆ ಕರ್ನಾಟಕದಲ್ಲಿ ಸಿದ್ಧರಾಮಯ್ಯನವರ ಅನ್ನ ಭಾಗ್ಯವಲ್ಲದಿದ್ದರೆ ಅದು 110 ಸ್ಥಾನಕ್ಕೇರುತಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಮಾತೆತ್ತಿದರೆ ಕಾಂಗ್ರೆಸ್ ಗೆ ಪಾಕಿಸ್ಥಾನದ ಜೊತೆ ಸಂಬಂಧ ಇದೆ ಅಂತಾ ಬಿಜೆಪಿ ದೂರುತ್ತಿದೆ. ಆದರೆ ಪಾಕ್ ಜೊತೆ ಬಿಜೆಪಿ ನಡೆಸಿದ ಚೆಲ್ಲಾಟದಷ್ಟು ಯಾರೂ ಆಡಿಲ್ಲ. ಬಿರಿಯಾನಿ ತಿನ್ನಲು ಮೋದಿ ಲಾಹೋರ್ ಗೆ ಹೋಗಿದ್ದಾರೆ. ಮಾವಿನ ಹಣ್ಣು ರಪ್ತು ವಿನಿಮಯ ಮಾಡಿದ್ದಾರೆ ಎಂಬುವುದಾಗಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.