ಮಂಗಳೂರು, ಫೆ 08 : ಮುಂಬರುವ ಬಿಜೆಪಿ ಚುನಾವಣೆ ಹಿನ್ನಲೆಯಲ್ಲಿ ರಣ ತಂತ್ರ ರೂಪಿಸುತ್ತಿರುವ ಬಿಜೆಪಿ ಚಾಣಾಕ್ಷ ಅಮಿತ್ ಶಾ ಮಂಗಳೂರಿಗೆ ಭೇಟಿ ನೀಡುವುದು ಖಚಿತವಾಗಿದೆ. ಇದೇ ಫೆ.18 ರಿಂದ 20 ರವರೆಗೆ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಿಗೆ ಭೇಟಿ ನೀಡಲಿದ್ದು ಸರಣಿ ಸಭೆಗಳನ್ನು ನಡೆಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿಯ ಭದ್ರಕೋಟೆ ಮಾತ್ರವಲ್ಲ, ಆರ್ಎಸ್ಎಸ್, ಹಿಂದೂ ಸಂಘಟನೆಗಳಿಂದ ಬಲಶಾಲಿಯಾಗಿದೆ. ಜಿಲ್ಲೆಯ 8 ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದಾರೆ. ಹೀಗಾಗಿ ಈ ಕ್ಷೇತ್ರಗಳ ಹೊಡೆದುರುಳಿಸಲು ಬಿಜೆಪಿಯೂ ನಾನಾ ಸರ್ಕಸ್ ಮಾಡುತ್ತಿದೆ. ಅದರ ಭಾಗ ಎಂಬಂತೆ ಬಿಜೆಪಿ ಚಾಣಾಕ್ಷ ಅಮಿತ್ ಶಾ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.
ಫೆ 18 ರಂದು ರಾತ್ರಿ 8.30ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ರಾತ್ರಿ10.30ಕ್ಕೆ ಕುಕ್ಕೆ ಸುಬ್ರಮಣ್ಯಕ್ಕೆ ತಲುಪಿ ಅಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಫೆ.19 ರ ಬೆಳಗ್ಗೆ 8 ಗಂಟೆಗೆ ಕುಕ್ಕೆ ಸುಬ್ರಮಣ್ಯದಲ್ಲಿ ಪೂಜೆ ಸಲ್ಲಿಸಿ 9 ಗಂಟೆಗೆ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಪುತ್ತೂರು ವಿವೇಕಾನಂದ ಕಾಲೇಜಿಗೆ ಭೇಟಿ ನೀಡಲಿದ್ದು ವಿದ್ಯಾರ್ಥಿಗಳ ಜತೆ ಸಂವಾದ ನಡೆಸಲಿದ್ದಾರೆ. ಮದ್ಯಾಹ್ನದ ವೇಳೆಗೆ ಬಂಟ್ವಾಳಕ್ಕೆ ಆಗಮಿಸಿ ನವಶಕ್ತಿ ಸಮಾವೇಶದಲ್ಲಿ ಭಾಗವಹಿಸಿ ಬಳಿಕ ಸುರತ್ಕಲ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಉಡುಪಿಯತ್ತ ತೆರಳುವರು.