ಮಂಗಳೂರು, ಫೆ 15 (Daijiworld News/MB) : ರಾಜ್ಯ, ದೇಶ, ವಿದೇಶಗಳಲ್ಲಿರುವ ಜಿಎಸ್ ಬಿ ಸಮುದಾಯದ ಸರ್ವರನ್ನು ಒಗ್ಗೂಡಿಸುವ ಜಿಪಿಎಲ್ 2020 ಕ್ರೀಡೋತ್ಸವ ಈ ಬಾರಿ ಅದ್ದೂರಿಯ ಉತ್ಸವದ ರೂಪ ಪಡೆದಿರುವುದಕ್ಕೆ ಖುಷಿಯಾಗುತ್ತಿದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ, ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಹೇಳಿದರು.
ಅವರು ಮಂಗಳೂರಿನ ಅಡ್ಯಾರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ನಡೆಯುತ್ತಿರುವ ಜಿಪಿಎಲ್ 2020 ಉತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ತಮ್ಮ ಸ್ವಾಗತ ಭಾಷಣದ ಆರಂಭದಲ್ಲಿ ಫುಲ್ವಾಮಾದಲ್ಲಿ ಹುತಾತ್ಮರಾಗಿರುವ ವೀರಯೋಧರನ್ನು ಸ್ಮರಿಸಿದ ವೇದವ್ಯಾಸ ಕಾಮತ್ ಅವರು ಗುರುವಾರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕಾರ್ತಿಕ ಮಲ್ಯ ಅವರ ಕುಟುಂಬಕ್ಕೆ ಆದಷ್ಟು ಸಹಾಯ ಮಾಡುವಂತೆ ಕಾರ್ಯಕ್ರಮದಲ್ಲಿ ಆಗಮಿಸುವ ಜನರಿಗೆ ಮನವಿ ಮಾಡಿದರು.
18 ವರ್ಷಗಳ ಹಿಂದೆ ಪ್ರಾರಂಭವಾದ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕೆ, ಅಸಹಾಯಕರ ಆರೋಗ್ಯ ಖರ್ಚಿಗೆ ನೆರವು ನೀಡುತ್ತಾ, ದೇವರ, ಮಠದ ಸ್ವಾಮಿಜಿಗಳ ಪ್ರತಿ ಕಾರ್ಯಕ್ರಮದಲ್ಲಿ ತನು, ಮನ, ಧನದಿಂದ ಪೂರ್ಣ ಸಹಕಾರ ನೀಡುತ್ತಾ ಬಂದಿದೆ. ಕಳೆದ 4 ವರ್ಷಗಳಿಂದ ಕೊಡಿಯಾಲ್ ಸ್ಪೋರ್ಟ್ ಅಸೋಸಿಯೇಶನ್ ಮತ್ತು ಯೂತ್ ಆಫ್ ಜಿಎಸ್ ಬಿ ಸಂಘಟನೆ ಕ್ರೀಡೆ, ಕಲೆ, ಸಾಹಿತ್ಯ, ಸಂಸ್ಕೃತಿ, ಮಹಿಳೆಯರಿಗಾಗಿ, ಮಕ್ಕಳಿಗಾಗಿ ಮತ್ತು ಸಮಾಜದಲ್ಲಿ ಅದ್ವೀತಿಯ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಯುವ ಜನರಿಗೆ ಪ್ರೇರಣೆ ನೀಡುವ ಕೆಲಸ ಮಾಡುತ್ತಿದೆ. ಮಿಸ್ಟರ್ ಅಂಡ್ ಮಿಸ್ ಜಿಎಸ್ ಬಿ, ಎಮೆಂಜಿಂಗ್ ಕಪಲ್ಸ್, ವಾಯ್ಸ್ ಆಫ್ ಜಿಎಸ್ ಬಿ ಸಹಿತ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹೊಸ ವೇದಿಕೆಯನ್ನು ಸೃಷ್ಟಿಸಿದೆ ಎಂದು ವೇದವ್ಯಾಸ ಕಾಮತ್ ಹೇಳಿದರು.
ಪ್ರತಿಯೊಂದು ಕಾರ್ಯಕ್ರಮದ ಯಶಸ್ಸಿಗೆ ಯುವ ತಂಡ ಸಮರ್ಥವಾಗಿ ಸೇವೆ ಸಲ್ಲಿಸುತ್ತಿದ್ದು ಯೂತ್ ಆಫ್ ಜಿಎಸ್ ಬಿ ಪ್ರಮುಖರಾದ ಮಂಗಲ್ಪಾಡಿ ನರೇಶ್ ಶೆಣೈ ಅವರನ್ನು ಶಾಸಕ ಕಾಮತ್ ಅಭಿನಂದಿಸಿದರು.
ಈ ಬಾರಿಯ ಜಿಪಿಎಲ್ 2020 ಉತ್ಸವದಲ್ಲಿ ಹತ್ತು ಹಲವು ರೀತಿಯ ಕಾರ್ಯಾಗಾರಗಳು, ಸ್ಪರ್ಧೆಗಳು ಇದ್ದು ಫುಡ್ ಕೋರ್ಟ್ ನಲ್ಲಿ ನೂರಾರು ಬಗೆಯ ಖಾದ್ಯಗಳು ಜನರಿಗೆ ಮನತಣಿಸುತ್ತಿವೆ ಎಂದರು.
ಒಟ್ಟು ಮೂರು ದಿನಗಳ ತನಕ ನಡೆಯುವ ಈ ಉತ್ಸವದಲ್ಲಿ 500 ರಷ್ಟು ಕಾರ್ಯಕರ್ತರು ನಿಸ್ವಾರ್ಥ ಸೇವಾಭಾವನೆಯಿಂದ ಕೆಲಸ ಮಾಡುತ್ತಿದ್ದು ವರ್ಷದಿಂದ ವರ್ಷಕ್ಕೆ ಯೂತ್ ಆಫ್ ಜಿಎಸ್ ಬಿ ಕಾರ್ಯಕರ್ತರ ಸಂಖ್ಯೆ ಹೆಚ್ಚಾಗುತ್ತಿರುವುದು ಒಳ್ಳೆಯ ದ್ಯೋತಕ ಎಂದು ಅವರು ಹೇಳಿದರು. ತಮ್ಮ ಕನಸಿನ ಯೋಜನೆಯೊಂದನ್ನು ಪ್ರಸ್ತಾಪಿಸಿದ ಶಾಸಕ ಕಾಮತ್ ಅವರು ಭವಿಷ್ಯದಲ್ಲಿ ಮಂಗಳೂರು ನಗರ ದಕ್ಷಿಣದಲ್ಲಿ ಸೇಫ್ ಸ್ಕೂಲ್ ಝೋನ್ ಸ್ಥಾಪಿಸುವ ಉದ್ದೇಶವಿದೆ ಎಂದು ಹೇಳಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಜಪಾ ರಾಜ್ಯಾಧ್ಯಕ್ಷರು ಹಾಗೂ ಮಂಗಳೂರು ಸಂಸದರಾಗಿರುವ ಶ್ರೀ ನಳಿನ್ ಕುಮಾರ್ ಕಟೀಲ್, ರಘುನಂದನ್ ಕಾಮತ್, ಮನೋಹರ್ ಕಾಮತ್, ಸತೀಶ್ ನಾಯಕ್, ಮುಂಡ್ಕೂರು ರಾಮದಾಸ್ ಕಾಮತ್, ಪ್ರಿಯಾ ನಾಗೇಂದ್ರ ಪೈ, ನಿತ್ಯಾನಂದ ಪೈ, ವರದರಾಜ್ ಪೈ, ರಾಜೇಶ್ ಕಿಣಿ, ಪ್ರದೀಪ್ ಪೈ, ನೀರಜ್ ಭಂಡಾರಿ, ರಾಘವೇಂದ್ರ ಕುಡ್ವ, ಪುತ್ತೂರು ನರಸಿಂಹ ನಾಯಕ್, ಪ್ರಶಾಂತ್ ರಾವ್, ಜಗನ್ನಾಥ್ ಕಾಮತ್, ವಿಜೇಂದ್ರ ಭಟ್, ಮಂಗಲ್ಪಾಡಿ ನರೇಶ್ ಶೆಣೈ, ನರೇಶ್ ಪ್ರಭು, ಚೇತನ್ ಕಾಮತ್ ಉಪಸ್ಥಿತರಿದ್ದರು. ಕಿರಣ್ ಶೆಣೈ ನಿರೂಪಿಸಿದರು. ಹನುಮಂತ ಕಾಮತ್ ವಂದಿಸಿದರು.