ಬಂಟ್ವಾಳ ಫೆ 08: ನರಿಕೊಂಬು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 6 ಕೋಟಿ ರುಪಾಯಿ ವೆಚ್ಚದಲ್ಲಿ ರಸ್ತೆ ಮತ್ತಿತರ ಅಭಿವೃದ್ದಿ ಕಾರ್ಯಗಳನ್ನು ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರಿಗೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ನರಿಕೊಂಬು ಗ್ರಾಮ ವ್ಯಾಫ್ತಿಯಲ್ಲಿ ಹಾಕಲಾಗಿದ್ದ ಬ್ಯಾನರ್ಗಳನ್ನು ಕಿಡಿಗೇಡಿಗಳು ಹರಿದು ಹಾನಿಗೊಳಿಸಿದ ಘಟನೆ ಬೆಳಕಿಗೆ ಬಂದಿದೆ. ನರಿಕೊಂಬು ಗ್ರಾಮದ ವಿವಿಧ ಭಾಗಗಳಿಗೆ ರಸ್ತೆ ಸಂಪರ್ಕಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅನುದಾನ ಒದಗಿಸಿದ್ದರು. ಈ ಸಂಬಂಧ ಸಚಿವರಿಗೆ ಕೃತಜ್ಞತೆ ಸಲ್ಲಿಸಿ ಅಲ್ಲಲ್ಲಿ ಬ್ಯಾನರ್ಗಳನ್ನು ಹಾಕಲಾಗಿತ್ತು. ಆದರೆ ಅದನ್ನು ಸಹಿಸದ ಕಿಡಿಗೇಡಿಗಳು ಬ್ಯಾನರನ್ನು ಸಂಪೂರ್ಣ ಹರಿದು ಭಗ್ನಗೊಳಿಸಿದ್ದಾರೆ.
ದೈವಸ್ಥಾನದಲ್ಲಿ ಪ್ರಾರ್ಥನೆ:
ಕಿಡಿಗೇಡಿಗಳ ಕುಕೃತ್ಯದಿಂದ ನೊಂದುಕೊಂಡಿರುವ ಗ್ರಾಮಸ್ಥರು ಬುಧವಾರ ಕಾರಣಿಕ ದೈವಕ್ಷೇತ್ರ ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನ, ಪಾಣೆಮಂಗಳೂರು ಶ್ರೀ ಸತ್ಯದೇವತಾ ಕಲ್ಲುರ್ಟಿ ಗುಡಿ, ಮೊಗರ್ನಾಡು ಅಬ್ಬಯಮಜಲು ಶ್ರೀ ಮಹಮ್ಮಾಯಿ ಸನ್ನಿಧಿ, ಏರಮಲೆ ಕಾಡೆದಿ ಭದ್ರಕಾಳಿ ದೇವಸ್ಥಾನ ಹಾಗೂ ಕೋದಂಡರಾಮ ಭಜನಾ ಮಂದಿರದಲ್ಲಿ ಅಭಿವೃದ್ದಿಯನ್ನು ಸಹಿಸದೆ ಕುಕೃತ್ಯ ಎಸಗಿರುವ ಕಿಡಗೇಡಿಗಳಿಗೆ ದೇವರು ಸದ್ಬುದ್ದಿ ನೀಡಲಿ, ಕೃತ್ಯ ಎಸಗಿರುವವರು ಯಾರು ಎಂಬುದನ್ನು ದೇವರು ತೋರಿಸಿ ಕೊಡಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ಪ್ರಮುಖರಾದ ಪ್ರಕಾಶ್ ಕಾರಂತ, ಅಲ್ಫೋನ್ಸ್ ಮಿನೇಜಸ್, ಉಮೇಶ್ ಬೋಳಂತೂರು, ಅಲ್ಬರ್ಟ್ ಮಿನೇಜಸ್, ಲಕ್ಷ್ಮಣ ಕಲ್ಯಾನಗ್ರಹಾರ, ಗಾಯತ್ರಿ, ರವೀಂದ್ರ ಸಪಲ್ಯ, ಕೃಷ್ಣಪ್ಪ ನಾಟಿ, ವಿಶ್ವನಾಥ ಕೊಡಂಗೆಕೋಡಿ, ರಮೇಶ ಬೋರುಗಡೆ, ಭರತ್ರಾಜ್, ದಿವಾಕರ, ಸುಂದರ ಏಳಬೆ, ಥೋಮಸ್ ಲಾರೆನ್ಸ್, ವಸಂತ ಶೆಟ್ಟಿ,ಸುಂದ ಮಡಿವಾಳ, ಮಾಧವ ಕರ್ಬೆಟ್ಟು, ಯೋಗೀಶ್ ಪನೋಲಿಬೈಲು, ಪ್ರವೀಣ್, ಅರುಣ ಶೆಟ್ಟಿ, ದೇಜಪ್ಪ, ರಾಜೇಶ್, ಕೇಶವ ಶಾಂತಿ, ಮೋನಪ್ಪ ಪೂಜಾರಿ, ಸಂಜೀವ ಸಪಲ್ಯ ಉಪಸ್ಥಿತರಿದ್ದರು.