ಮಂಗಳೂರು, ಫೆ.15 (DaijiworldNews/PY): ಶ್ರೀನಿವಾಸ ಗೌಡರನ್ನು ಕರೆಸಿ ಪರಿಣಿತರಿಂದ ತರಬೇತಿ ಕೊಡಿಸಲಾಗುವುದು ಎಂದು ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಈ ಬಗ್ಗೆ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು, ಒಮ್ಮೆ ಈ ವ್ಯಕ್ತಿಯ ಮೈಕಟ್ಟನ್ನು ಗಮನಿಸಿ, ಈತ ಅಸಾಧಾರಣ ಸಾಹಸ ಮಾಡಲು ಸಮರ್ಥನಾಗಿದ್ದಾನೆ. ಈತನಿಗೆ ಕೇಂದ್ರ ಕ್ರೀಡಾ ಸಚಿವರಾದ ಕಿರಿಣ್ ರಿಜಿಜು 100 ಮೀ ಓಟಗಾರನಾಗಲು ಸಮರ್ಥ ತರಬೇತಿಯನ್ನು ನೀಡಲು ಅನುಕೂಲ ಕಲ್ಪಿಸಬೇಕು ಅಥವಾ ಓಲಂಪಿಕ್ನಲ್ಲಿ ಕಂಬಳವನ್ನು ಸೇರಿಸಬೇಕು. ಏನೇ ಆಗಲಿ ಶ್ರೀನಿವಾಸ ಗೌಡ ಅವರಿಗೆ ಚಿನ್ನದ ಪದಕಸಿಗಬೇಕು ಎಂದು ಟ್ವೀಟ್ ಮಾಡಿದ್ದರು.
ಈ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಶ್ರೀನಿವಾಸ ಗೌಡರನ್ನು ಕರೆಸಿ ಪರಿಣಿತರಿಂದ ತರಬೇತಿ ಕೊಡಿಸಲಾಗುವುದು ಎಂದಿದ್ದಾರೆ.
ಜಗತ್ತಿನ ಅತೀ ವೇಗದ ಓಟಗಾರ ಹುಸೈನ್ ಬೋಲ್ಟ್ ದಾಖಲೆಯನ್ನು ಹಿಂದಿಕ್ಕಿ ಕರ್ನಾಟಕದ ಕರಾವಳಿಯ ಕಂಬಳ ಕೋಣಗಳ ಓಟಗಾರ ಶ್ರೀನಿವಾಸ್ ಹೊಸ ದಾಖಲೆ ಬರೆದಿದ್ದಾರೆ. ಕಂಬಳ ಕ್ರೀಡೆಯಲ್ಲಿ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ಎಂದೇ ಹೆಸರುವಾಸಿಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಅಶ್ವಥಪುರ ನಿವಾಸಿ ಕಂಬಳ ಕೋಣದ ಓಟಗಾರ ಶ್ರೀನಿವಾಸ ಗೌಡ ಅವರು ಈಗ ಹೊಸ ದಾಖಲೆಯನ್ನು ಬರೆದಿದ್ದಾರೆ.
ಹುಸೈನ್ ಬೋಲ್ಟ್ 100 ಮೀ. ಓಟವನ್ನು ಕೇವಲ 9.58 ಸೆಕೆಂಡ್ ಅವಧಿಯಲ್ಲಿ ಕ್ರಮಿಸಿದರೆ, ಶ್ರೀನಿವಾಸ ಗೌಡ ಕಂಬಳ ಗದ್ದೆಯ ಕೆಸರಿನಲ್ಲಿ ಕೋಣಗಳ ಜೊತೆ 100 ಮೀಟರನ್ನು ಕೇವಲ 9.55 ಸೆಕೆಂಡ್ಗಳಲ್ಲಿ ಪೂರ್ಣಗೊಳಿಸಿದ್ದಾರೆ. ಶ್ರೀನಿವಾಸ ಗೌಡ ಅವರು ಯಾವ ತರಬೇತಿಯನ್ನು ಪಡೆಯದೆ ಸ್ವಂತ ಆಸಕ್ತಿಯಿಂದ ಕಂಬಳ ಕ್ಷೇತ್ರದಲ್ಲಿ ತೊಡಗಿಸಿಕೊಂಡು ದಾಖಲೆ ಮಾಡಿದ್ದಾರೆ. ಈ ಋತುವಿನ ಕಂಬಳ ಕ್ರೀಡಾಕೂಟದಲ್ಲಿ ಅತೀ ಹೆಚ್ಚು ಚಿನ್ನದ ಪದಕಗಳನ್ನು ಪಡೆಯುವ ಮೂಲಕ ಕಂಬಳ ಕೂಟದ ಚಿನ್ನದ ಓಟಗಾರನಾಗಿ ಪ್ರಸಿದ್ಧಿಯಾಗಿದ್ದಾರೆ.
ಆನಂದ್ ಮಹೀಂದ್ರಾ ತಮ್ಮ ಟ್ವೀಟ್ನಲ್ಲಿ ಕರ್ನಾಟಕದ ಕರಾವಳಿ ಪ್ರದೇಶದ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳಕ್ಕೆ ಬೆಂಬಲ ನೀಡಿದ್ದು, ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸಿದ್ದಕ್ಕಾಗಿ ಹಾಗೂ ಕಂಬಳವನ್ನು ಬೆಂಬಲಿಸಿದ್ದಕ್ಕಾಗಿ ಆನಂದ್ ಮಹೀಂದ್ರಾ ಅವರಿಗೆ ಟ್ವೀಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.