ಮಂಗಳೂರು, ಫೆ 15 (Daijiworld News/MB) : ವಿಧಾನಸಭೆಯ 6ನೆ ಅಧಿವೇಶನದಲ್ಲಿ ಎರಡು ದಿನ ಸಂವಿಧಾನದ ಕುರಿತು ವಿಶೇಷ ಚರ್ಚೆ ನಡೆಸುವುದಾಗಿ ಸ್ಪೀಕರ್ ಹೇಳಿದ್ದು, ಇದರ ಹಿಂದೆ ಹಿಡನ್ ಅಜೆಂಡವಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆರೋಪಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಎ ಹಾಗೂ ಎನ್ಆರ್ಸಿಯನ್ನು ಸಮರ್ಥಿಸಲು ಈ ಚರ್ಚೆಗೆ ಮುಂದಾಗಿರುವಂತೆ ಭಾಸವಾಗುತ್ತಿದೆ. ಇಂತಹ ಚರ್ಚೆ ಅಸಂವಿಧಾನಿಕ ಮಾತ್ರವಲ್ಲದೆ, ಸರಕಾರ ಹಾಗೂ ಸಭಾಧ್ಯಕ್ಷರ ಅಧಿಕಾರ ದುರುಪಯೋಗದ ಪರಮಾವಧಿ ಎಂದು ಟೀಕೆ ಮಾಡಿದ್ದಾರೆ.
ಬಿಎಸಿ (ಬಿಸಿನೆಸ್ ಸಲಹಾ ಸಮಿತಿ) ಯಲ್ಲಿ ವಿಧಾನಸಭೆಯಲ್ಲಿ ವಿಶೇಷ ಚರ್ಚೆಗೆ ಸಂಬಂಧಿಸಿ ಯಾವ ವಿಷಯ ಕುರಿತಂತೆ ಚರ್ಚೆ ನಡೆಸಬೇಕು ಎಂದು ತೀರ್ಮಾನವಾಗಬೇಕು. ಅದು ಆಗದೆ ಈ ರೀತಿ ಚರ್ಚೆಗೆ ಅವಕಾಶವಿಲ್ಲ. ಹಾಗೂ ಚರ್ಚೆ ನಡೆಸಲೇ ಬೇಕು ಎಂದಾದಲ್ಲಿ ೧೦೦ ವರ್ಷ ಹಳೆಯ ಐಸಿಸಿ, ಸಿಆರ್ಎಇಸಿ, ಭೂ ಕಂದಾಯ ಕಾಯ್ದೆ ಬಗ್ಗೆ ಚರ್ಚೆ ನಡೆಸಬಹುದು. ಅದು ಬಿಟ್ಟು ಸಂವಿಧಾನದ ಬಗ್ಗೆ ವಿಶೇಷ ಚರ್ಚೆ ಯಾಕಾಗಿ ಎಂದು ಪ್ರಶ್ನಿಸಿದರು.
ಹಾಗೆಯೇ ಈ ಬಗ್ಗೆ ವಿಧಾನ ಸಭಾಧ್ಯಕ್ಷರು ಮರುಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.
ಹೈಕೋರ್ಟ್ ಪ್ರತಿಭಟನೆ ವೇಳೆ 144 ಸೆಕ್ಷನ್ ಜಾರಿ ಮಾಡಿದ ಆಯುಕ್ತರ ಆದೇಶ ಕಾನೂನು ಬಾಹಿರ ಎಂದು ಹೇಳಿದ್ದು ಅದನ್ನು ಸ್ವಾಗತಿಸುತ್ತೇನೆ ಎಂದು ಹೇಳಿದ ಐವನ್ ಡಿಸೋಜಾ, "ಮಂಗಳೂರಿನಲ್ಲಿ ಗೋಲಿಬಾರ್ ನಡೆದ ಹಿಂದಿನ ದಿನ ಸೆಕ್ಷನ್ ಜಾರಿ ಮಾಡಲಾಗಿತ್ತು. ಇಬ್ಬರು ಗೋಲಿಬಾರ್ನಿಂದಾಗಿ ಮೃತಪಟ್ಟರು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಗೃಹ ಸಚಿವರು ಹಾಗೂ ಮೂಖ್ಯಮಂತ್ರಿಗಳು ಮೃತರ ಕುಟುಂಬಸ್ಥರಲ್ಲಿ ಕ್ಷಮೆಯಾಚಿಸಬೇಕು. ಈ ಬಗ್ಗೆ ವಿಧಾನಸಭೆಯಲ್ಲೂ ಪ್ರತಿಭಟನೆ ಮಾಡುತ್ತೇನೆ ಎಂದು ಅವರು ಹೇಳಿದರು.
ಶಾಸಕ ಯು.ಟಿ ಖಾದರ್ ಹಾಗೂ ಶಾಹೀನ್ ಶಾಲೆಯ ಮಕ್ಕಳು, ಪೋಷಕರ ಮೇಲೆ ಹಾಕಲಾಗಿರುವ ದೇಶಸ್ರೋಹದ ಪ್ರಕರಣವನ್ನು ಕೈ ಬಿಡಬೇಕು ಎಂದು ಆಗ್ರಹ ಮಾಡಿದರು.
ಸುಪ್ರೀಂ ಕೋರ್ಟ್ ಬಾಬರಿ ಮಸೀದಿ ಧ್ವಂದ ಪ್ರಜರಣವನ್ನು ನೆನಪು ಮಾಡಿಕೊಳ್ಳಬಾರದು ಎಂದು ಹೇಳಿರುವಾಗ ಕಲ್ಲಡ್ಕ ಪ್ರಭಾಕರ ಭಟ್ ಅವರ ಶಾಲೆಯಲ್ಲಿ ಬಾಬರು ಮಸೀದಿ ಧ್ವಂಸದ ಕುರಿತಾಗಿ ಪೊಲೀಸ್ ಅಧಿಕಾರಿಗಳ ಎದುರೇ ನಾಟಕ ಪ್ರದರ್ಶನ ಮಾಡಿದ್ದನ್ನು ದೇಶದ್ರೋಹವಾಗಿ ಸ್ವಯಂ ಪ್ರೇರಿತ ಪ್ರಕರಣ ಯಾಕೆ ದಾಖಲು ಮಾಡಲಿಲ್ಲ ಎಂದು ಪ್ರಶ್ನೆ ಮಾಡಿದರು.
ದಕ್ಷಿಣ ಕನ್ನಡ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳುತ್ತಿದ್ದಾರೆ. ಈಗ ಅವರು ಯಾವ ರೀತಿಯ ಪ್ಯಾಕೇಜ್ ಎಂದು ಹೇಳಲಿ. ಎಲ್ಲಾ ಶಾಸಕರನ್ನು ಕರೆಸಿ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿ ಬಜೆಟ್ನಲ್ಲಿ ವಿಶೇಷ ಅನುದಾನ ಪ್ರಸ್ತಾವ ಮಾಡುವುದರ ಕುರುತಾಗಿ ಚರ್ಚಿಸಬೇಕು. ಆ ನಂತರ ಯೋಜನೆ ತಯಾರಿ ಮಾಡಬೇಕು. ಬಜೆಟ್ನಲ್ಲಿ ಏನು ಚರ್ಚೆಯಾಗಬೇಕು ಎಂಬ ತೀರ್ಮಾನವಾಗಬೇಕು. ಹಾಗಾಗಿ ಉಸ್ತುವಾರಿ ಸಚಿವರು ಈ ಕೂಡಲೇ ಸಭೆ ಕರೆದು ಸಲಹೆ ಪಡೆಯಬೇಕು ಎಂದು ಐವನ್ ಡಿಸೋಜ ಹೇಳಿದರು.