ಉಳ್ಳಾಲ, ಫೆ 15 (Daijiworld News/MB) : "ಸ್ಕ್ರೀನ್ ಮೇಲೆ ಮಾತ್ರ ಸಿನಿಮಾ ತಾರೆಯರು ಹೀರೋಗಳು. ಆದರೆ ಹರೇಕಳ ಹಾಜಬ್ಬ ರಿಯಲ್ ಹೀರೋ" ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಹರೇಕಳದ ನ್ಯೂಪಡ್ಪುವಿನಲ್ಲಿರುವ ಹರೇಕಳ ಹಾಜಬ್ಬರ ಶಾಲೆಗೆ ಶನಿವಾರ ಭೇಟಿ ನೀಡಿ ಅವರು ಮಾತನಾಡಿದರು.
"ನನ್ನ ಆರು ತಿಂಗಳ ಅವಧಿಯಲ್ಲಿ ಹಲವು ಸಂತರು ಮತ್ತು ವ್ಯಕ್ತಿಗಳನ್ನು ಭೇಟಿಯಾಗಿದ್ದೇನೆ. ಆದರೆ ಹರೇಕಳ ಹಾಜಬ್ಬ ಅವರನ್ನು ನಾನು ಮೊದಲ ಬಾರಿಗೆ ಭೇಟಿಯಾಗುತ್ತಿದ್ದು ಇದು ನನ್ನ ಜೀವನದ ಅತ್ಯಂತ ಮಹತ್ವದ ದಿನ" ಎಂದು ಹೇಳಿದರು.
"ಇಂದು ಹಲವಾರು ಜನರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಸಿ ವ್ಯವಹಾರ ಮಾಡುತ್ತಿದ್ದಾರೆ. ಅವರನ್ನು ನಾವು ಶಿಕ್ಷಣ ತಜ್ಞ ಎಂದು ಹೇಳುತ್ತೇವೆ. ಆದರೆ ನಿಜವಾದ ಶಿಕ್ಷಣ ತಜ್ಞ ಎಂದೆನಿಸಿರುವ ಅಕ್ಷರ ಸಂತನಿಗೆ ರಾಜ್ಯದ ಜನರ ಪರವಾಗಿ ಕೃತಜ್ಞತೆ ಸಲ್ಲಿಸಲು ಬಂದಿದ್ದೇನೆ" ಎಂದರು.
"ಪದ್ಮಶ್ರೀ ಪ್ರಶಸ್ತಿಯು ಹಲವರಿಗೆ ದೊರೆತಿದೆ. ಆದರೆ ಕಿತ್ತಳೆ ಹಣ್ಣು ಮಾರಿದವರಿಗೆ ಚಹಾ ಮಾರಿದವರು ನೀಡಿದ್ದಾರೆ. ಹಾಜಬ್ಬನವರು ದೊಡ್ಡ ವ್ಯಕ್ತಿಗಳ ಪೈಕಿ ಪ್ರಮುಖರು. ಇವರನ್ನು ಮಾಧ್ಯಮಗಳು ಗುರುತಿಸದಿದ್ದರೆ ಎಲೆಮರೆಯ ಕಾಯಾಗಿ ಹೋಗುತ್ತಿದ್ದರು" ಎಂದು ಹೇಳಿದರು.
"ಶಾಲೆಗೆ ಹತ್ತನೇ ತರಗತಿ ವಿದ್ಯಾರ್ಥಿಗಳು ರಾಯಭಾರಿಗಳು. ನಮ್ಮ ಫಲಿತಾಂಶದ ಮೇಲೆ ಹೆಚ್ಚು ಮಕ್ಕಳು ಶಾಲೆಗೆ ದಾಖಲಾಗುತ್ತಾರೆ. ಪರೀಕ್ಷೆಗೆ ಯಾವುದೇ ಭಯಪಡಬೇಡಿ, ನಿಮಗೆ ಪಿಯುಸಿ, ಬಿಎಸ್ಸಿ ಪ್ರಶ್ನೆ ಪತ್ರಿಕೆಗಳನ್ನು ನೀಡುವುದಿಲ್ಲ. ಸೋಮವಾರ ನಡೆಯಲಿರುವ ಸಿದ್ಧತಾ ಪರೀಕ್ಷೆಗೆ ಪರೀಕ್ಷಾ ಬೋರ್ಡ್ನಿಂದಲ್ಲೇ ಪ್ರಶ್ನೆ ಪತ್ರಿಕೆ ನೀಡಲಾಗುತ್ತದೆ. ಅಂದಿನ ಪರೀಕ್ಷೆಗೆ ನೀವು ಸಿದ್ದರಾಗಿ ಹಾಜಬ್ಬರ ಕನಸು ನನಸು ಮಾಡಿ" ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
"ಹಾಗೆಯೇ ಕಿತ್ತಳೆ ಮಾರಿ ಶಾಲೆ ಕಟ್ಟಿಸಿದ ಇವರಿಗೆ ಸಮಾಜವೇ ತಲೆಬಾಗಬೇಕು. ನನ್ನದು ನನಗೆ ನಿನ್ನದೂ ನನಗೆ ಎಂಬುವವರ ನಡುವೆ ಹಾಜಬ್ಬನವರು ನನ್ನದು ನಿನಗೆ ನಿನ್ನದೂ ನಿನಗೆ ಎನ್ನುವ ಭಾವನೆಯವರು. ಹಾಗಾಗಿ ನನ್ನ ಈ ಮನವಿಯನ್ನು ಗಂಭೀರವಾಗಿ ಗಣನೆಗೆ ತೆಗೆದುಕೊಂಡು ಪ್ರಾಮಾಣಿಕ ಪ್ರಯತ್ನ ಮಾಡಿ" ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭಲ್ಲಿ ಹಾಜಬ್ಬನವರು ಶಾಲಾ ಆವರಣದ ಗೋಡೆ, ಕಟ್ಟಡ ದುರಸ್ತಿ, ಕರ್ನಾಟಕ ಪಬ್ಲಿಕ್ ಶಾಲೆ ಬೇಡಿಕೆಯನ್ನು ತಿಳಿಸಿದರು.
"ರಾಜ್ಯ ಶಿಕ್ಷಣ ಸಚಿವರು ಹಳ್ಳಯ ಶಾಲೆಗೆ ಬರಲು ಮಾಧ್ಯಮ ಕಾರಣ, ಸಾಮಾನ್ಯ ಮನುಷ್ಯನ ಹೆಗಲಿಗೆ ಕೈಹಾಕಿ ಶಿಕ್ಷಣ ಸಚಿವರು ಮಾತನಾಡಲು ಮಾಧ್ಯಮದವರೇ ಕಾರಣ. ಮಾಧ್ಯಮದವರು ಸಾಮಾನ್ಯ ವ್ಯಕ್ತಿಯನ್ನು ಇಷ್ಟು ಎತ್ತರಕ್ಕೆ ಏರಿಸಿದ್ದಾರೆ" ಎಂದು ಹಾಜಬ್ಬ ಹೇಳಿದರು.